Saturday, August 13, 2022

Latest Posts

ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ ರವಿ

ಚಾಮರಾಜನಗರ: ಜಿಲ್ಲೆಯಲ್ಲಿ ಯಾವುದೇ ಕರ್ತವ್ಯನಿರತ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಎಂ.ಆರ್ ರವಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸರ್ಕಾರಿ ಅಧಿಕಾರಿ ನೌಕರರ ಕುಂದು-ಕೊರತೆ, ಸಮಸ್ಯೆ, ಸೇವಾ ಸೌಲಭ್ಯಗಳ ಶೀಘ್ರ ಸ್ಪಂದನೆಗಾಗಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರಂಭದಲ್ಲಿಯೇ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಅವರ ಸಮ್ಮುಖದಲ್ಲಿ ಸಂಘದ ಪದಾಧಿಕಾರಿಗಳು ಸರ್ಕಾರಿ ಅಧಿಕಾರಿ ನೌಕರರ ಮೇಲೆ ಆಗುತ್ತಿರುವ ಹಲ್ಲೆ ಪ್ರಕರಣಗಳು ಬಗ್ಗೆ ಪ್ರಸ್ತಾಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ನೌಕರರಿಗೆ ಅಭದ್ರತೆ ಕಾಡದಂತೆ ನೋಡಿಕೊಳ್ಳಬೇಕಿದೆ. ಸಾರ್ವಜನಿಕ ಜೀವನದಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ರಕ್ಷಣೆ ಸಿಗಬೇಕು. ಕರ್ತವ್ಯದ ಸಂದರ್ಭದಲ್ಲಿ ಯಾವುದೇ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡುವ ಪ್ರಕರಣಗಳು ಜಿಲ್ಲೆಯಲ್ಲಿ ಮರುಕಳಿಸಬಾರದು. ಎಲ್ಲ್ಲಿಯೇ ಆಗಲಿ ಸರ್ಕಾರಿ ನೌಕರರ ವಿರುದ್ದ ಅನುಚಿತ ವರ್ತನೆ ತೋರಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದೆಂದು ಅವರು ತಿಳಿಸಿದರು.
ಕರ್ತವ್ಯನಿರತ ಸಂದರ್ಭದಲ್ಲಿ ಯಾರೇ ಆಗಲಿ ಹಲ್ಲೆ ಮಾಡಿದಾಗ ಅಥವಾ ಅಮಾನವೀಯವಾಗಿ ನಡೆದುಕೊಂಡಾಗ ಕೂಡಲೇ ಅಧಿಕಾರಿಗಳು ಸಿಬ್ಬಂದಿ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಧÉೈರ್ಯವಾಗಿ ದೂರುಗಳನ್ನು ದಾಖಲಿಸಬೇಕು. ಸಾರ್ವಜನಿಕರ ಕೆಲಸವನ್ನು ನಿರ್ವಹಿಸುವ ಅಧಿಕಾರಿ ನೌಕರರ ಜೊತೆ ಸೌಜನ್ಯದಿಂದ ವರ್ತಿಸದೇ ಇರುವುದನ್ನು ಸಹಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕೋವಿಡ್-19 ಸಂಧರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಸರ್ಕಾರದ ಪರಿಹಾರ ನೆರವು, ಇಲಾಖೆಗಳಲ್ಲಿ ಬಾಕಿಯಿರುವ ಪದೋನ್ನತಿ, ಬಡ್ತಿ, ಸರ್ಕಾರಿ ನೌಕರರ ಸಂಘಕ್ಕೆ ನಿವೇಶನ ಸೇರಿದಂತೆ ಒಟ್ಟು 24 ಬೇಡಿಕೆಗಳನ್ನು ನೌಕರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್ ಆನಂದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಧರಣೇಶ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜವರೇಗೌಡ, ಜಿಲ್ಲಾ ನೌಕರ ಸಂಘದ ಗೌರವ ಅಧ್ಯಕ್ಷ ವಾರೇಶ್ ಸಂಗೊಂದಿ, ಪ್ರಧಾನ ಕಾರ್ಯದರ್ಶಿ ಎಸ್.ಮಹದೇವಸ್ವಾಮಿ, ಖಜಾಂಚಿ ಮಹದೇವಯ್ಯ, ಕೊಳ್ಳೇಗಾಲ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಡಾ.ಆರ್.ಉಮಾಶಂಕರ್, ಯಳಂದೂರು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ವೈ.ಎಂ.ಮಂಜುನಾಥ್, ಹನೂರು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರಾದ ಎಂ.ಗುರುಸ್ವಾಮಿ, ಇತರ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss