Friday, August 12, 2022

Latest Posts

ಕರ್ನಾಟಕದಲ್ಲಿ 1 ಕೋಟಿ ಟನ್ ಸಕ್ಕರೆ ಸಂಗ್ರಹ: ಸಚಿವ ಶಿವರಾಮ ಹೆಬ್ಬಾರ್

ಬೆಳಗಾವಿ: ರಾಜ್ಯದಲ್ಲಿ ಈ ಬಾರಿ ೧೦,೯೦೦ ಕೋಟಿ ರೂಪಾಯಿ ಬೆಲೆಯ ಕಬ್ಬು ಬೆಳೆಯಲಾಗಿದೆ. ೧೦,೭೬೦ ಕೋಟಿ ರೂಪಾಯಿಗಳು ರೈತರೆಗೆ ಬಿಲ್ ಪಾವತಿಸಲಾಗಿದ್ದು ಒಂದು ಪ್ರತಿಶತ ಮಾತ್ರ ಕಬ್ಬಿನ ಹಣ ಪಾವತಿಸುವುದು ಉಳಿದಿದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ತಿಳಿಸಿದರು.
ನಗರದಲ್ಲಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಅಧ್ಯಯನ ಸಂಸ್ಥೆಯ ಆಡಳಿತ ಮಂಡಳಿಯ ಸಭೆಯಲ್ಲಿ ಭಾಗ ವಹಿಸುವ ಮುಂಚೆ ಮಾಧ್ಯಮದವರ ಜತೆ ಅವರು ಮಾತನಾಡಿದರು.
೧ ಕೋಟಿ ಟನ್ ಸಕ್ಕರೆ ಕರ್ನಾಟಕದಲ್ಲಿ ಸಂಗ್ರಹ ಇದೆ. ಕೇಂದ್ರ ಸರ್ಕಾರ ಸಂಗ್ರಹ ಇರುವ ಸಕ್ಕರೆಯನ್ನು ರಪ್ತು ಮಾಡಲು ಅನುಮತಿ ನೀಡಿಲ್ಲ ಎಂದು ಸಕ್ಕರೆ ಮತ್ತು ಕಾರ್ಮಿಕ ಇಲಾಖೆಯ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ಅವರು ತಿಳಿಸಿದರು.
ರೈತರು ಮಿತಿಮೀರಿ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಭೂಮಿಯ ಜೀವಸತ್ವ ಹಾಳಾಗುತ್ತಿರುವುದರ ಜತೆಗೆ ರೈತರ ಆರ್ಥಿಕತೆಯ ಮೇಲೂ ಪೆಟ್ಟು ಬೀಳುತ್ತಿದೆ. ಆದ್ದರಿಂದ ರೈತರು ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸಿ ಕೃಷಿ ಕೈಗೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ರೈತರು ಹೊಸ ಹೊಸ ತಳಿಗಳನ್ನು ಉತ್ಪಾದನೆ ಮಾಡಬೇಕು. ಕಡಿಮೆ ವೆಚ್ಚದಲ್ಲಿ ಕಬ್ಬು ಬೆಳೆಯುವುದನ್ನು ಕಲಿಯಬೇಕು. ಬೆಳೆಯುವ ಕಬ್ಬಿಗೆ ಇಳುವರಿ ಹೆಚ್ಚು ಆಗಬೇಕು. ಬೆಳೆಯುವ ಕಬ್ಬುಗಳಿಂದ ಹೆಚ್ಚು ಸಕ್ಕರೆ ಉತ್ಪಾದನೆ ಮಾಡಬೇಕು ಎಂಬುದು ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯ ಉದ್ದೇಶ ಆಗಿದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಇರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಈ ಭಾಗದ ಹವಾಮಾನಕ್ಕೆ ಸಂಬಂಸಿದಂತೆ ಹೊಸ ಹೊಸ ತಳಿಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಸಕ್ಕರೆ ಉತ್ಪಾದನೆಯಲ್ಲಿ ಸಿಂಹಪಾಲು ಬೆಳಗಾವಿ ಜಿಲ್ಲೆ ಹೊಂದಿದೆ ಹಾಗಾಗಿ ಸಂಶೋಧನೆಗಾಗಿ ಜಾಡಶಾಹಾಪೂರದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಗಾಗಿ ಸ್ಥಳ ಪರಿಶೀಲನೆ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ಕೋವಿಡ್-೧೯ ಹಿನ್ನೆಲೆಯಲ್ಲಿ ರಾಜ್ಯದ ಕಬ್ಬು ಬೆಳೆಗಾರರು ಹಾಗೂ ಅಡಿಕೆ ಬೆಳೆಗಾರರಿಗೆ ಯಾವದೇ ತೊಂದರೆ ಆಗಿಲ್ಲ ಆದರೆ ಇನ್ನುಳಿದ ಬೆಳೆಗಾರರು ತಮ್ಮ ಜೀವನದ ಶಕ್ತಿಯನ್ನು ಕಳೆದುಕೊಂಡಿದ್ದಾರೆ.
ನಕಲಿ ಕಾರ್ಮಿಕ ಕಾರ್ಡಗೆ ಕಡಿವಾಣ:
ನಿಜವಾದ ಕಾರ್ಮಿಕರ ಬಗ್ಗೆ ಪರಿಶೀಲನೆ ಮಾಡಿ ಬೇರೆ ರೀತಿಯಲ್ಲಿ ಕಾರ್ಮಿಕ ಕಾರ್ಡ ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು. ಕಾರ್ಮಿಕ ಕಾರ್ಡುಗಳ ದುರುಪಯೋಗ ಆಗುವುದರಿಂದ ಅರ್ಹ ಕಾರ್ಮಿಕರಿಗೆ ಮೋಸ ಮಾಡಿದಂತೆ ಆಗುತ್ತದೆ. ಇದರಿಂದಾಗಿ ಕಾರ್ಮಿಕರ ಹಿತಾಸಕ್ತಿ ರಕ್ಷಣೆಗೆ ಮಾಡಲು ಆಗುವುದಿಲ್ಲ.
ಕಾರ್ಮಿಕರ ಕಾರ್ಡ ಎಂಬುವುದು ದೊಡ್ಡ ಉದ್ಯೋಗ ಆಗಿದೆ. ಅದಕ್ಕಾಗಿ ನಕಲಿ ಕಾರ್ಮಿಕರ ಕಾರ್ಡು ಮಾಡುವ ಜಾಲ ತಡೆಯಲು ವ್ಯವಸ್ಥಿತ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಹೇಳಿದರು.
ಕಾರ್ಮಿಕರಿಗೆ ಶಕ್ತಿ ಕೊಡುವ ನಿಟ್ಟಿನಲ್ಲಿ ಹಾಗೂ ಕಾರ್ಮಿಕರಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಕೆಲಸ ಆಗಬೇಕು. ಕೋವಿಡ್-೧೯ ಹಿನ್ನೆಲೆಯಲ್ಲಿ ಪರಿಹಾರ ಧನದ ರೂಪದಲ್ಲಿ ಕಾರ್ಮಿಕರಿಗೆ ೫೦೦೦ ರೂಪಾಯಿ ಘೋಷಣೆ ಮಾಡಿದಾಗ ಹಾವೇರಿ ಜಿಲ್ಲೆ ಒಂದರಲ್ಲಿ ೩೦ ಸಾವಿರ ಕಾರ್ಮಿಕರು ಕಾರ್ಮಿಕ ಕಾರ್ಡ ಮಾಡಿಸಿಕೊಂಡಿದ್ದಾರೆ ಅದೇ ರೀತಿ ರಾಜ್ಯ ಅನೇಕ ಕಡೆಗಳಲ್ಲಿ ನಕಲಿ ಕಾರ್ಮಿಕರು ಉದ್ಭವಿಸಲು ಆರಂಭಿಸಿದ್ದಾರೆ ಎಂದು ತಿಳಿಸಿದರು.
ಕಾರ್ಮಿಕ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಬೇಕು ಎಂದು ಅನೇಕ ಹೊಸ ಹೊಸ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತಿದ್ದು, ಕಾರ್ಮಿಕ ಭಾವನೆಗಳನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾರ್ಡು ನವೀಕರಿಸದಿದ್ದರೂ ಪರಿಹಾರ ಧನ ನೀಡುತ್ತೆವೆ ಆದರೆ ಪರಿಹಾರ ಧನ ಘೋಷಣೆ ಮಾಡಿದ ನಂತರದಲ್ಲಿ ಕಾರ್ಮಿಕ ಕಾರ್ಡು ಮಾಡಿಸಿದವರಿಗೆ ಪರಿಹಾರ ದೊರೆಯುವದಿಲ್ಲ. ಕಾರ್ಮಿಕರ ಕಾರ್ಡು ನಿಜವಾದ ಕಾರ್ಮಿಕರಿಗೆ ಸಿಗಬೇಕು ಎಂಬುವುದೆ ಕಾರ್ಮಿಕ ಇಲಾಖೆಯ ಮೂಲಭೂತ ಉದ್ದೇಶವಾಗಿದೆ ಎಂದು ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ತಿಳಿಸಿದರು.
ಸಕ್ಕರೆ ಇಲಾಖೆಯ ಆಯುಕ್ತ ಅಕ್ರಮ ಪಾಷಾ, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಆರ್.ಬಿ.ಖಾಂಡಗಾವೆ, ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ, ಆರ್.ಸಿ.ಯು. ಕುಲಪತಿ ಡಾ. ರಾಮಚಂದ್ರಗೌಡ, ಚುನಾಯಿತ ಸದಸ್ಯರಾದ ಅಶೋಕ ಪಾಟೀಲ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss