Sunday, March 7, 2021

Latest Posts

ಕರ್ನಾಟಕ ಗಡಿ ನಿಯಂತ್ರಣದಿಂದ ಮಂಜೇಶ್ವರ-ಕಾಸರಗೋಡು ತಾಲೂಕಿನವರಿಗೆ ವಿನಾಯಿತಿ ನೀಡಿ

ಹೊಸದಿಗಂತ ವರದಿ,ಕಾಸರಗೋಡು:

ಕೇರಳದಲ್ಲಿ ಕೋರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವುದರಿಂದ ಕರ್ನಾಟಕ ಗಡಿ ಭಾಗದಲ್ಲಿ ಮುಂಜಾಗ್ರತಾ ಕ್ರಮದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಪ್ರಯಾಣ ನಿಬಂಧನೆಯನ್ನು ವಿಧಿಸಿದೆ. ಆದರೆ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನವರಿಗೆ ಕರ್ನಾಟಕಕ್ಕೆ ತೆರಳಲು ಈ ನಿಬಂಧನೆಯಿಂದ ವಿನಾಯಿತಿ ನೀಡಬೇಕೆಂದು ಸಹಯಾತ್ರಿ – ದಕ್ಷಿಣ ಕನ್ನಡ ಅವಲಂಬಿತ ಗಡಿನಾಡ ಸಹ ಪ್ರಯಾಣಿಕರ ವೇದಿಕೆ ಆಗ್ರಹಿಸಿದೆ. ಈ ಎರಡು ತಾಲೂಕಿನವರಿಗೆ ಯಾವುದೇ ರೀತಿಯ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಬಾರದೆಂದು ಸಂಘಟನೆಯು ತಿಳಿಸಿದೆ.
ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಬಹುತೇಕ ಮಂದಿ ವಿದ್ಯಾರ್ಥಿಗಳು, ಉದ್ಯೋಗಿಗಳು, ನಾನಾ ರೋಗಿಗಳು, ವ್ಯಾಪಾರಿಗಳು ಸಹಿತ ಅಪಾರ ಮಂದಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿದ್ದಾರೆ. ಕೋವಿಡ್ ಲಾಕ್‌ಡೌನ್‌ನಿಂದಾಗಿ ಉಂಟಾದ ಆರ್ಥಿಕ ದುಃಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಗಡಿ ಬಂದ್‌ನಿಂದಾಗಿ ಈ ಎರಡು ತಾಲೂಕುಗಳ ಜನರಿಗೆ ಭಾರೀ ಹೊಡೆತ ಬೀಳುವಂತಾಗಿದೆ. ಆದ್ದರಿಂದ ಈ ಎರಡು ತಾಲೂಕುಗಳ ನಿವಾಸಿಗಳಿಗೆ ಕರ್ನಾಟಕಕ್ಕೆ ತೆರಳಲು ಆಧಾರ್ ಕಾರ್ಡ್ ಸಹಿತ ಇನ್ನಿತರ ಯಾವುದೇ ದಾಖಲೆ ಪತ್ರಗಳನ್ನು ನೀಡಿದರೆ ಸಾಕೆಂಬ ವ್ಯವಸ್ಥೆ ಜಾರಿಗೊಳಿಸಬೇಕೆಂದು ಸಂಘಟನೆಯು ಒತ್ತಾಯಿಸಿದೆ.
ಜಿಲ್ಲೆಯಿಂದ ಸಾವಿರಾರು ಮಂದಿ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ದಿನನಿತ್ಯ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುತ್ತಿದ್ದಾರೆ. ಇದೇ ವೇಳೆ ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯು ಹೆಚ್ಚುತ್ತಿದ್ದರೂ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ದಿನಂಪ್ರತಿ 10ಕ್ಕಿಂತಲೂ ಕಡಿಮೆ ಸೋಂಕಿತರಿರುವುದಾಗಿದೆ. ಆದರೆ ಜಿಲ್ಲೆಯ ಹೊಸದುರ್ಗ ಮತ್ತು ವೆಳ್ಳರಿಕುಂಡು ತಾಲೂಕುಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಅಲ್ಲಿನ ನಿವಾಸಿಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಅಷ್ಟಾಗಿ ಹೊಂದಿಕೊಂಡಿಲ್ಲ ಎಂದು ಸಂಘಟನೆಯು ಅಭಿಪ್ರಾಯಪಟ್ಟಿದೆ.
ಕೇರಳ ಆರೋಗ್ಯ ಇಲಾಖೆಯ ಅನಾಸ್ಥೆಯಿಂದಾಗಿ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನ ಕಳೆದಂತೆ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆಯು ಇನ್ನಷ್ಟು ಜಾಗ್ರತೆ ಪಾಲಿಸಿ ಜನಸಾಮಾನ್ಯರು ಅನುಭವಿಸುವ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಸಹಯಾತ್ರಿ – ದಕ್ಷಿಣ ಕನ್ನಡ ಅವಲಂಬಿತ ಗಡಿನಾಡ ಸಹ ಪ್ರಯಾಣಿಕರ ವೇದಿಕೆಯು ಆಗ್ರಹಿಸಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss