Monday, August 8, 2022

Latest Posts

ಕರ್ನಾಟಕ ಗೃಹ ಮಂಡಳಿಯಿಂದ 1140 ಮನೆ ನಿರ್ಮಾಣದ ಯೋಜನೆ

ಹೊಸ ದಿಗಂತ ವರದಿ, ಮಡಿಕೇರಿ: 

ಮಡಿಕೇರಿ ಕೆ.ನಿಡುಗಣೆ ಗ್ರಾಮ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ 94 ಎಕರೆ ವಿಸ್ತೀರ್ಣದ ಜಾಗದಲ್ಲಿ ವಸತಿ ಉದ್ದೇಶಕ್ಕೆ ಕರ್ನಾಟಕ ಗೃಹ ಮಂಡಳಿ ಕೋರಿರುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಇತ್ತೀಚೆಗೆ ನಡೆದ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಅನುಮೋದನೆ ದೊರೆತಿದೆ ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ರಮೇಶ್ ಹೊಳ್ಳ ಅವರು ತಿಳಿಸಿದ್ದಾರೆ.
ನಗರದ ಸುದರ್ಶನ ಅತಿಥಿ ಗೃಹದಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ವಿಧಾನಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಅವರ ಉಪಸ್ಥಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಸತಿ ಉದ್ದೇಶ ವಿನ್ಯಾಸದ ನಕ್ಷೆಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸುಮಾರು 94 ಎಕರೆ ಜಾಗದಲ್ಲಿ ಇಡಬ್ಲ್ಯುಎಸ್(439), ಎಲ್‍ಐಜಿ(211), ಎಂಐಜಿ(145), ಎಚ್‍ಐಜಿ-1(219), ಎಚ್‍ಐಜಿ-2(126) ಸೇರಿದಂತೆ ಒಟ್ಟು 1,140 ನಿವೇಶನ ಒಳಗೊಂಡ ನಕಾಶೆ ತಯಾರು ಮಾಡಲಾಗಿದೆ. ವಿವಿಧ ಹಂತದ ನಿವೇಶನ ಅಭಿವೃದ್ಧಿಪಡಿಸಲು ಕರ್ನಾಟಕ ಗೃಹ ಮಂಡಳಿಗೆ ಅನುಮೋದನೆ ನೀಡಲಾಗಿದೆ ಎಂದು ರಮೇಶ್ ಹೊಳ್ಳ ಅವರು ವಿವರಿಸಿದರು.
ಮಡಿಕೇರಿ ನಗರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗೃಹ ಮಂಡಳಿ ವತಿಯಿಂದ ವಸತಿ ಕಲ್ಪಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದರು.
ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮಡಿಕೇರಿ ನಗರಸಭೆ ಮತ್ತು ನಗರಾಭಿವೃದ್ಧಿ ಪಾಧಿಕಾರ ಮುಂದಾಗಬೇಕು ಎಂದು ಸಲಹೆ ಮಾಡಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿರುವ ಗದ್ದಿಗೆ ಉದ್ಯಾನ ಅಭಿವೃದ್ಧಿಪಡಿಸಲು ರಾಜಾಸೀಟು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ ಉದ್ಯಾನವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದ ಕಾರಣ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಗದ್ದಿಗೆ ಉದ್ಯಾನವನ ಅಭಿವೃದ್ಧಿ ಪಡಿಸುವುದು ಸೂಕ್ತವೆಂದು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಮಾತನಾಡಿ, ನಗರದ ಡಿಎಆರ್ ಕ್ವಾಟ್ರಸ್ ಹಿಂಭಾಗದಲ್ಲಿನ ಕೆರೆಯ ಸುತ್ತಲೂ ಇರುವ ಸರ್ಕಾರಿ ಜಾಗದಲ್ಲಿ ಪ್ರಾಧಿಕಾರದ ವತಿಯಿಂದ ಪಾತ್ ವೇ ಉದ್ಯಾನವನ್ನು ನಿರ್ಮಿಸಲು ಮುಂದಾಗುವಂತೆ ಸಲಹೆ ಮಾಡಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು ಮಾತನಾಡಿ ಮಡಿಕೇರಿ ನಗರದಲ್ಲಿ ವಾಹನ ನಿಲುಗಡೆಗೆ ತುಂಬಾ ತೊಂದರೆಯಾಗುತ್ತಿದ್ದು, ಯೋಗ್ಯ ಸ್ಥಳ ಗುರುತಿಸುವಂತಾಗಬೇಕು. ಆ ನಿಟ್ಟಿನಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಿಸುವಂತಾಗಬೇಕು. ಈಗಿರುವ ಮಂಗಳೂರು-ಮೂರ್ನಾಡು ರಸ್ತೆಯ ಪ್ರವಾಸಿ ಮಂದಿರವನ್ನು ತೆರವುಗೊಳಿಸಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಸಲಹೆ ಮಾಡಿದರು.
ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ವಿಭಾಗದ ಪ್ರಾದೇಶಿಕ ಅಧಿಕಾರಿ ಅವರಿಗೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಡಿಕೇರಿ ನಗರದ ಅಭಿವೃದ್ಧಿ ಸಂಬಂಧ ಕೋಟೆ ಆವರಣದ ಸುತ್ತಲೂ ಇರುವ ಜಾಗದಲ್ಲಿ ನಗರಸಭೆ ವತಿಯಿಂದ ಪಾತ್ ವೇ ವ್ಯವಸ್ಥೆ ಮಾಡಬೇಕು ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಅವರು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಡಿಕೇರಿ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಸಲಹೆ, ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿ ಮೈಸೂರು ವಿಭಾಗದ ಕಾರ್ಯಪಾಲಕ ಅಭಿಯಂತರರು ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾಮದ 94 ಎಕರೆ ಜಾಗವನ್ನು ವಸತಿ ಉದ್ದೇಶದ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಬೇಕಾಗಿ ಸಭೆಯಲ್ಲಿ ಕೋರಿದರು.
ಮಡಿಕೇರಿ ನಗರ ಯೋಜನಾ ಆಯುಕ್ತೆ ಎಲ್.ಲಾವಣ್ಯ, ಪೌರಾಯುಕ್ತ ಎಸ್.ವಿ.ರಾಮದಾಸ್, ಸಜಿತ್, ಕೆ.ಕೆ.ಜಯಂತಿ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss