Thursday, June 30, 2022

Latest Posts

ಕರ್ನಾಟಕ ಪಶ್ಚಿಮ ಪದವೀಧರ ಚುನಾವಣೆ: ಧಾರವಾಡದಲ್ಲಿ  ಶೇ.70.11ರಷ್ಟು ದಾಖಲೆ ಮತದಾನ

ಧಾರವಾಡ: ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ನಾಲ್ಕು ಜಿಲ್ಲೆಗಳ ಒಟ್ಟು 146 ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅತ್ಯಂತ ಶಾಂತಿಯುತ ಮತದಾನ ನಡೆದಿದೆ.
ಗದಗ-ಧಾರವಾಡ, ಹಾವೇರಿ-ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಕೋವಿಡ್-19 ಮುನ್ನಚ್ಚರಿಕೆ ಹಾಗೂ ಅಗತ್ಯ ಸಿದ್ಧತಾ ಕ್ರಮಗೊಳೊಂದಿಗೆ ಮತದಾನ ಕಾರ್ಯ ಪೂರ್ಣಗೊಂಡಿದೆ.
ಹೊಸದಾಗಿ ನೋಂದಾಯಿಸಲ್ಪಟ್ಟ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸಿದ ಹಿನ್ನಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಈ ಭಾರಿ ಶೇ.70.11ರಷ್ಟು ದಾಖಲೆ ಮತದಾನವಾಗಿದೆ.
ನಾಲ್ಕು ಜಿಲ್ಲೆಗಳ ಒಟ್ಟು 74,278 ಮತದಾರರ ಪೈಕಿ 35,664 ಪುರುಷರು, 16,415 ಮಹಿಳೆಯರು ಸೇರಿದಂತೆ ಒಟ್ಟು 52,080 ಪಶ್ಚಿಮ ಕ್ಷೇತ್ರದ ಪದವೀಧರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ಕೊನೆಯ ಒಂದು ಗಂಟೆ ಕೋವಿಡ್ ಸೋಂಕಿತರಿಗೆ ಅವಕಾಶ ಕಲ್ಪಿಸಿತ್ತು. ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ ಶೇ.74.95ರಷ್ಟು ಹಾಗೂ ಹಾವೇರಿ ಜಿಲ್ಲೆಯಲ್ಲಿ ಅತೀ ಕಡಿಮೆ ಶೇ.67.89ರಷ್ಟು ಮತದಾನವಾಗಿದೆ.
ಕೊರೋನಾ ಹಾವಳಿ ನಡುವೆಯೂ ಕಳೆದ ಆಯೋಗದ ಜಾಗೃತಿ ಕಾರ್ಯಕ್ರಮ ಹಾಗೂ ಮತದಾರರ ವಿಶೇಷ ಆಸಕ್ತಿಯಿಂದಾಗಿ (ಶೇ.49.84) ಭಾರಿಗಿಂತ ಶೇ.21.27ರಷ್ಟು ಮತದಾನ ಹೆಚ್ಚಳವಾಗಿರುವುದು ವಿಶೇಷ.

ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ.28ರಂದು ನಡೆದ ಚುನಾವಣೆಯಲ್ಲಿ ಶೇ.70.11ರಷ್ಟು ಮತದಾನವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ ಹಾಗೂ ದಾಖಲೆ ಮತದಾನಕ್ಕೆ ಸಾಕ್ಷಿಭೂತರಾದ ಮತದಾರರಿಗೆ, ಸಹಕರಿಸಿರುವ ನೌಕರರಿಗೆ, ಪೊಲೀಸ್ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳಿಗೆ ಕೃತಜ್ಞೆಗಳು.
ಆಮ್ಲನ್ ಆದಿತ್ಯ ಬಿಸ್ವಾಸ್,
ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss