ಉಡುಪಿ: ಕೇಂದ್ರ ಸರಕಾರದ ವಿವಿಧ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಕರೆ ನೀಡಿದ ಸ್ವಯಂಪ್ರೇರಿತ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಉಡುಪಿ ನಗರದ ಸಿಟಿ ಬಸ್ಸು ನಿಲ್ದಾಣದಲ್ಲಿ ಇಂದು ಬೆಳಗ್ಗೆ ಬಲವಂತವಾಗಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಬಲವಂತದ ಬಂದ್ಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದರೂ ಬಂದ್ಗೆ ಬೆಂಬಲ ಕೊಟ್ಟ ವಿವಿಧ ಸಂಘಟನೆಯವರು ಬಸ್ಸು ಸಂಚಾರ ನಡೆಸದಂತೆ ತಡೆದಿದ್ದರು. ಈ ಸಂದರ್ಭ ಬಸ್ಸು ನಿರ್ವಾಹಕ-ಚಾಲಕರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರು ಬಸ್ಸುಗಳು ಸಂಚರಿಸದಂತೆ ರಸ್ತೆಯ ಮೇಲೆ ಕುಳಿತು, ರಸ್ತೆ ತಡೆ ನಡೆಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ನಗರಸಭಾ ಸದಸ್ಯ ರಮೇಶ್ ಕಾಂಚನ್, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್, ಸಿಪಿಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಆರ್.ಕೆ. ರಮೇಶ್. ಅನ್ನದಾತ ಆಟೋ ಯೂನಿಯನ್ನ ಶಿವಾನಂದ ಮೂಡಬೆಟ್ಟು ಮೊದಲಾದವರಿದ್ದರು.
ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಲು ಎರಡು ಕೆಎಸ್ಆರ್ಪಿ, ಆರು ಜಿಲ್ಲಾ ಸಶಸ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ಉಡುಪಿ ನಗರದ ಸರ್ವಿಸ್, ಸಿಟಿ ಮತ್ತು ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಉಡುಪಿ ಸಿಟಿ ಬಸ್ಸುಗಳು, ಕೆನರಾ ಬಸ್ಸು ಮಾಲಕರ ಸಂಘದ ಬಸ್ಸುಗಳು ಮತ್ತು ಕೆಎಸ್ಆರ್ಟಿಸಿ ಬಸ್ಸುಗಳ ಸಂಚಾರ ಮುಂದುವರಿದಿದೆ.