ವಿಜಯಪುರ: ವಿವಿಧ ಸಂಘಟನೆಗಳು ಸೆ.28 ರಂದು ಕರೆ ನೀಡಿರುವ ಕರ್ನಾಟಕ ಬಂದ್ ವೇಳೆ ಜಿಲ್ಲೆಯಲ್ಲಿ ಯಾವುದೇ ರೀತಿ ಶಾಂತಿ ಭಂಗ ಹಾಗೂ ಆಸ್ತಿಪಾಸ್ತಿಗೆ ಹಾನಿಯಾದ್ದಲ್ಲಿ ಅಂತಹ ಸಂಘಟನೆ, ಸಂಘಟಕರನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಕರ್ನಾಟಕ ಬಂದ್ ಸಂದರ್ಭ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಹಾಗೂ ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯಾ ಸಂಘಟನೆಗಳ ಮುಖಂಡರುಗಳಿಗೆ ನೋಟಿಸ್ ನೀಡಲಾಗಿದೆ. ಉಚ್ಛ ನ್ಯಾಯಾಲಯದ ಆದೇಶದಂತೆ ಯಾವುದೇ ರೀತಿ ಶಾಂತಿ ಭಂಗವನ್ನುಂಟು ಮಾಡುವ ಹಾಗೂ ಸಾರ್ವಜನಿಕ, ಸರ್ಕಾರಿ ಆಸ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿದರೆ, ಅಂತಹವರನ್ನೇ ಜವಾಬ್ದಾರಿ ಮಾಡಲಾಗುವುದು. ಯಾವುದೇ ಬಲವಂತದ ಬಂದ್ಗೆ ಅವಕಾಶ ಇರುವುದಿಲ್ಲ. ಅಲ್ಲದೆ ಹೆದ್ದಾರಿ ಅಥವಾ ಬೇರೆ ರಸ್ತಾರೋಕೋಗೆ ಅವಕಾಶ ಇರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಇತರೆ ವಾಹನಗಳ ಸಂಚಾರ ವ್ಯವಸ್ಥೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಜಿಲ್ಲೆಯಲ್ಲಿ 65 ಪೊಲೀಸ್ ಅಧಿಕಾರಿಗಳು, 1100 ಪೊಲೀಸ್ ಸಿಬ್ಬಂದಿ, ಡಿಎಆರ್- 6 ತುಕುಡಿ ಹಾಗೂ ಐಆರ್ಬಿ 1 ತುಕುಡಿಗಳನ್ನು ನಿಯೋಜಿಸಲಾಗಿದ್ದು, ಅಲ್ಲಲ್ಲಿ ಪೊಲೀಸ್ ಗಸ್ತುಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.