ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳು ಹಲವು ವಿದ್ವಂಸಕ ಕೃತ್ಯಗಳಿಗಾಗಿ ಐಸಿಸ್ ಉಗ್ರರು ಬಳಸುತ್ತಿದ್ದಾರೆ ಎಂಬ ಸ್ಫೋಟಕ ವರದಿ ಬಹಿರಂಗವಾಗಿದ್ದು, ಈ ಹಿನ್ನೆಲೆ ಸಾಮಾಜಿಕ ಮಾಧ್ಯಮಗಳನ್ನು ಗುಪ್ತಚರ ಕಣ್ಗಾವಲು ಅಡಿಯಲ್ಲಿ ಇರಿಸಲಾಗಿದೆ.
ಭಾರತದ ಭದ್ರತೆಗೆ ವಿರೋಧಿ ಶಕ್ತಿಗಳು ದೇಶ ವಿರೋಧಿ ದ್ವೇಷವನ್ನು ಪ್ರಚಾರ ಮಾಡಲು ಟ್ವಿಟ್ಟರ್ ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿವೆ ಎಂದು ಮುಂಗಾರು ಅಧಿವೇಶನದ ರಾಜ್ಯಸಭೆಯಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದರು.
ಇಸ್ಲಾಮಿಕ್ ಸ್ಟೇಟ್ (ಐಸಿಸ್) ತನ್ನ ಸಿದ್ಧಾಂತದ ಪ್ರಚಾರಕ್ಕೆ ವಿವಿಧ ಅಂತರ್ಜಾಲ ಆಧಾರಿತ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದೆ. ಸೈಬರ್ಸ್ಪೇಸ್ ಅನ್ನು ಈ ನಿಟ್ಟಿನಲ್ಲಿ ಸಂಬಂಧಿತ ಏಜೆನ್ಸಿಗಳು ಸೂಕ್ಷ್ಮವಾಗಿ ಅವಲೋಕಿಸುತ್ತಿವೆ ಮತ್ತು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರೆಡ್ಡಿ ಹೇಳಿದರು.
ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಐಸಿಸ್ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿವಿಧ ರಾಜ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ಗೆ (ಐಸಿಸ್) ಸೇರ್ಪಡೆಯಾದ ಕೆಲವು ನಿದರ್ಶನಗಳು ಕೇಂದ್ರ ಮತ್ತು ರಾಜ್ಯಗಳ ಭದ್ರತಾ ಸಂಸ್ಥೆಗಳ ಗಮನಕ್ಕೆ ಬಂದಿವೆ ಎಂದು ರೆಡ್ಡಿ ತಿಳಿಸಿದರು.
ದಕ್ಷಿಣ ರಾಜ್ಯಗಳಾದ ತೆಲಂಗಾಣ, ಕೇರಳ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಐಸಿಸ್ ಸೇರಿ ಇತರೆ ಉಗ್ರ ಸಂಘಟನೆಗಳ ಜತೆ ನಂಟು ಹೊಂದಿದ ಆರೋಪದಡಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 17 ಪ್ರಕರಣಗಳನ್ನು ದಾಖಲಿಸಿ, 122 ಆರೋಪಿಗಳನ್ನು ಬಂಧಿಸಿದೆ. ಎಲ್ಲಾ ರಾಜ್ಯಗಳಲ್ಲಿ ಐಸಿಸ್ ಹೆಚ್ಚು ಸಕ್ರಿಯವಾಗಿದೆ ಎಂದು ಎನ್ಐಎ ನಡೆಸಿದ ತನಿಖೆಯಿಂದ ತಿಳಿದುಬಂದಿದೆ.