Wednesday, August 10, 2022

Latest Posts

ಕರ್ನಾಟಕ ಸಿಇಟಿ ಪರೀಕ್ಷೆ; ಕಾಞಂಗಾಡಿನಿಂದ ತಲಪಾಡಿಗೆ 11 ಕೆಎಸ್ಆರ್ ಟಿಸಿ ಬಸ್ ಸೌಲಭ್ಯ: ಕ್ವಾರಂಟೈನ್ ಕಡ್ಡಾಯ

ಕಾಸರಗೋಡು: ಕರ್ನಾಟಕ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಪ್ರವೇಶಾತಿ (ಸಿಇಟಿ) ಪರೀಕ್ಷೆಗೆ ಹಾಜರಾಗುವ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಜುಲೈ 30, 31 ಹಾಗೂ ಆಗಸ್ಟ್ 1ರಂದು ಕಾಞಂಗಾಡಿನಿಂದ ತಲಪ್ಪಾಡಿಗೆ 11 ಕೆಎಸ್ಆರ್ ಟಿಸಿ ಬಸ್ ಸೌಲಭ್ಯ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಬೆಳಗ್ಗೆ 5.30ರಿಂದ ಪ್ರತಿ ನಿಮಿಷಕ್ಕೊಂದು ಬಸ್ ನಂತೆ 11 ಬಸ್ ಗಳು ಈ ನಿಟ್ಟಿನಲ್ಲಿ ಸಂಚಾರ ನಡೆಸಲಿವೆ. ಇವುಗಳಲ್ಲಿ 6 ಬಸ್ ಗಳು ಕಾಞಂಗಾಡು – ಮಾವುಂಗಾಲ್ – ಚೆರ್ಕಳ ರೂಟ್ ನಲ್ಲಿ ಮತ್ತು 5 ಬಸ್ ಗಳು ಕಾಞಂಗಾಡು – ಚಂದ್ರಗಿರಿ ರೂಟ್ ನಲ್ಲಿ ಸಂಚಾರ ನಡೆಸಲಿವೆ. ಎಲ್ಲಿಂದ ಬೇಕಿದ್ದರೂ ವಿದ್ಯಾರ್ಥಿಗಳು ಬಸ್ ಏರಬಹುದಾಗಿದೆ. ವಿದ್ಯಾರ್ಥಿಗಳು ಎಲ್ಲಿಂದ ಕೈತೋರಿದರೂ ನಿಲುಗಡೆ ಮಾಡುವಂತೆ ಬಸ್ ಚಾಲಕರಿಗೆ ಆದೇಶ ನೀಡಲಾಗಿದೆ. ಆದರೆ ಒಮ್ಮೆ ಬಸ್ ಏರಿದ ವಿದ್ಯಾರ್ಥಿಗೆ ಇಳಿಯಲು ತಲಪ್ಪಾಡಿಯಲ್ಲಿ ಮಾತ್ರ ಅನುಮತಿ ಇರುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಪರೀಕ್ಷೆ ಮುಗಿಸಿ ಮರಳುವ ವೇಳೆ ತಲಪ್ಪಾಡಿಯಲ್ಲಿ ಸಂಜೆ 5 ಗಂಟೆಯಿಂದ ಕಾಞಂಗಾಡು ತನಕವೂ ಕೆಎಸ್ಆರ್ ಟಿಸಿ ಬಸ್ ಗಳು ಸಂಚಾರ ನಡೆಸಲಿವೆ. ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೂ ಬಸ್ ನಲ್ಲಿ ಜತೆಗೆ ಪ್ರಯಾಣ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವಿವರಣೆ ನೀಡಿದರು.
ತಲಪ್ಪಾಡಿಯಿಂದ ನಂತರ ಕರ್ನಾಟಕ ಸರಕಾರ ವತಿಯಿಂದ ಬೆಳಗ್ಗೆ 7.30ರಿಂದ ವಾಹನ ಸೌಲಭ್ಯ ಏರ್ಪಡಿಸಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ತಿಳಿಸಿದರು. ಯಾವುದೇ ಸಂದೇಹಗಳಿದ್ದಲ್ಲಿ ಕಾಸರಗೋಡು ಜಿಲ್ಲಾ ನಿಯಂತ್ರಣ ಕೊಠಡಿ: 04994 – 255001, ಬೆಂಗಳೂರು: 080 – 23462758 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ಕಡ್ಡಾಯ
ಕರ್ನಾಟಕ ಸಿಇಟಿ ಪರೀಕ್ಷೆಗೆ ಹಾಜರಾಗಿ ಮರಳುವ ವಿದ್ಯಾರ್ಥಿಗಳು ಕಡ್ಡಾಯವಾಗಿ 14 ದಿನಗಳ ರೂಮ್ ಕ್ವಾರಂಟೈನ್ ಪಾಲಿಸಬೇಕು. ಕರ್ನಾಟಕ ಸರಕಾರದ ಅನುಮತಿ ಲಭಿಸಿ ಹೆತ್ತವರೂ ಪರೀಕ್ಷಾ ಕೇಂದ್ರ ವರೆಗೆ ತೆರಳಿದ್ದರೆ ಅವರೂ ಈ ಆದೇಶ ಪಾಲಿಸಬೇಕು. ಖಾಸಗಿ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಯ್ಯುವುದಿದ್ದರೂ ಅಭ್ಯಂತರವಿಲ್ಲ. ಆದರೆ ಪರೀಕ್ಷೆ ಮುಗಿಸಿ ಮರಳುವ ವೇಳೆ ಕೋವಿಡ್-19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಬೇಕಾದುದು ಕಡ್ಡಾಯವಾಗಿದೆ. ಇವರೂ 14 ದಿನಗಳ ರೂಮ್ ಕ್ವಾರಂಟೈನ್ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss