Wednesday, June 29, 2022

Latest Posts

ಕಲಬುರಗಿ| ಕರ್ನಾಟಕ ಏಕೀಕರಣ ರೀತಿಯ ಒಗ್ಗಟ್ಟನ್ನು ರಾಜ್ಯದ ಅಭಿವೃದ್ಧಿಗೆ ತೋರಬೇಕು: ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ

ಕಲಬುರಗಿ: ಅಂದು ಲಕ್ಷಾಂತರ ಕನ್ನಡಿಗರು ಒಗ್ಗಟ್ಟು ತೋರಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಏಕೀಕರಣಗೊಳಿಸಿದ್ದಾರೆ. ಆ ಹೋರಾಟಗಾರರು ತೋರಿದ ಒಗ್ಗಟ್ಟಿನ ಪ್ರದರ್ಶನವನ್ನು ನಾವು ಇಂದು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ತೋರಬೇಕಿದೆ ಎಂದು ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅವರು ಪ್ರತಿಪಾದಿಸಿದರು.

ಭಾನುವಾರ ನಗರದ ನಹರು ಗಂಜ್ ಪ್ರದೇಶದ ನಗರೇಶ್ವರ ಪ್ರೌಢಶಾಲೆಯಲ್ಲಿ ನಡೆದ 65ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ನಾಡ ದೇವತೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಕಲೆ, ಸಾಹಿತ್ಯ, ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಸದೃಢ, ಸಮೃದ್ಧ ಹಾಗೂ ಸ್ವಾವಲಂಭಿ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯೋಣ ಎಂದು ಅವರು ಕರೆ ನೀಡಿದರು.

ಕನ್ನಡಿಗರು ಸಹೃದಯಿಗಳು, ಧಾರ್ಮಿಕ ಸಹಿಷ್ಣುತೆವುಳ್ಳ ಪ್ರಜ್ಞಾವಂತರು. ನಮ್ಮಲ್ಲಿ ಧರ್ಮ, ಸಂಸ್ಕøತಿ, ಸಂಪ್ರದಾಯಗಳು ಹಲವು, ಆದರೆ ಭಾವನೆ ಮಾತ್ರ ಒಂದೇ ಎಂದು ಗುಣಗಾನ ಮಾಡಿದರು.
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು, ಸಿಖ್ಖರು, ಮುಂತಾದ ಎಲ್ಲಾ ಧರ್ಮಿಯರು, ಧರ್ಮ ಸಹಿಷ್ಣತೆ, ಸಮನ್ವಯತೆ, ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಅಂತೆಯೇ ದೇಶದಲ್ಲಿ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿರುವ ಮತ್ತು ಶಾಸ್ತ್ರೀಯ ಭಾಷೆಯಾಗಿರುವ ಕನ್ನಡ ಸಾಹಿತ್ಯಕ್ಕೆ ಇಂದು 8 ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹಾಡಿಹೊಗಳಿದರು.

ಕನ್ನಡ ನಾಡು ವಿವಿಧ ಧರ್ಮ ಸಂಸ್ಕøತಿಗಳ ಸಮಾಗಮವಾಗಿದೆ. ಮೌರ್ಯರು, ಕದಂಬರು, ಹೊಯ್ಸಳರು, ವಿಜಯನಗರದ ಅರಸರು, ಚಾಲುಕ್ಯರು, ರಾಷ್ಟ್ರಕೂಟರು, ಮೈಸೂರಿನ ಒಡೆಯರು ಮುಂತಾದ ಅನೇಕ ರಾಜಮನೆತನಗಳು ಈ ನಾಡನ್ನು ಆಳಿವೆ. ಈ ಮನೆತನಗಳ ಕೊಡುಗೆ ನಾಡಿಗೆ ಅಪಾರವಾಗಿದೆ. ದಾಸಶ್ರೇಷ್ಠ ಕನಕದಾಸರು, ಪುರಂದರದಾಸರು, ಸರ್ವಜ್ಞ, ಶಿಶುನಾಳ ಷರೀಫ್ ಅವರಂಥ ಸಂತ ಕವಿಗಳು, ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವಣ್ಣನವರು ಸೇರಿದಂತೆ ಶರಣರು, ವಚನಕಾರರು, ಬಾಳಿ ಬದುಕಿದ ನೆಲ ನಮ್ಮದು ಎಂದು ಅವರು ಬಣ್ಣಿಸಿದರು.

ಭಕ್ತಿ, ಸಾಹಿತ್ಯ ಹಾಗೂ ಸಾಮಾಜಿಕ ಕಲ್ಯಾಣವನ್ನು ಜತೆಯಾಗಿ ಬೆಸದ ಜಗತ್ತಿನ ಅಪೂರ್ವ ಚಳುವಳಿಯೊಂದು ರೂಪಗೊಂಡು 12ನೇ ಶತಮಾನದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ನೆಲ ಕಲ್ಯಾಣ ಕರ್ನಾಟಕ ಇದಾಗಿದೆ ಎಂದು ಹೆಚ್ಚೆಯಿಂದ ನುಡಿದರು.

“ಕವಿರಾಜ ಮಾರ್ಗ” ಎಂಬ ಕನ್ನಡಕ್ಕೆ ಮೊಟ್ಟ ಮೊದಲ ಕನ್ನಡದ ಗ್ರಂಥ ನೀಡಿದ್ದು ನೃಪತುಂಗನ ನಾಡು ಕಲಬುರಗಿ ಜಿಲ್ಲೆ ಎಂಬುದು ಅತ್ಯಂತ ಹೆಮ್ಮೆಯ ವಿಷಯ. ಕವಿ ಅಮೋಘವರ್ಷ ನೃಪತುಂಗನ “ಕವಿರಾಜ ಮಾರ್ಗ” ಕೃತಿಯು “ಕಾವೇರಿಯಿಂದ ಗೋದಾವರಿವರೆಗೆ” ಕನ್ನಡ ನಾಡು ವಿಸ್ತರಿಸಿರುವ ವೈಭವವನ್ನು ವರ್ಣಿಸಿದೆ ಎಂದು ಅವರು ಕಾವ್ಯದ ಮಹತ್ವ ತಿಳಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ಡಾ.ಶಂಕರ ವಣಿಕ್ಯಾಳ ಅವರು ಕಲಬುರಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಶ್ರೀಮತಿ ವಿ.ವಿ.ಜ್ಯೋತ್ಸ್ನಾ ಅವರಿಗೆ 2 ಸಾವಿರ ರೂಪಾಯಿ ಚೆಕ್ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ, ವಿಧಾನ ಸಭೆ ಶಾಸಕರುಗಳಾದ ಖನೀಜ್ ಫಾತೀಮಾ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ ಸೇರಿದಂತೆ ಗಣ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss