ಕಲಬುರಗಿ: ಕಲಬುರಗಿ ಅಕ್ಕಮಹಾದೇವಿ ಕಾಲೋನಿಯ ವಿಶ್ವ ಭಾರತಿ ಪಕ್ಕದ ಕಟ್ಟಡ ಕಾರ್ಮಿಕರಿಗೆ ಕೊರೋನಾ ವೈರಸ್ (ಕೋವಿಡ್-19) ಕುರಿತು ಅರಿವು ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಜರ್ ವಿತರಣೆ ಹಾಗೂ ಆಯುಷ್ ಇಲಾಖೆಯಿಂದ ಆರ್ಸೆನಿಕ್ ಅಲ್ಬಂ-30 ಮಾತ್ರೆಗಳನ್ನು ರವಿವಾರ ವಿತರಿಸಲಾಯಿತು.
ಕಲಬುರಗಿ ಕಾರ್ಮಿಕ ಇಲಾಖೆ, ಜನಶಿಕ್ಷಣ ಸಂಸ್ಥೆ, ಮಹಾತ್ಮಾ ಗಾಂಧಿಜೀ ಗ್ರಾಹಕ ಹಿತರಕ್ಷಣಾ ವೇದಿಕೆ ಹಾಗೂ ಸಂಕಲ್ಪ ಸ್ವಸಹಾಯ ಸಂಘ ಇವುಗಳ ಸಹಯೋಗದೊಂದಿಗೆ ಕಲಬುರಗಿ ಹೈಕೋರ್ಟ್ ಪೀಠದ ಹತ್ತಿರದ ವಿಶ್ವಭಾರತಿ ಪಿ.ಯು. ಕಾಲೇಜಿನ ಪಕ್ಕದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ಅವರು ಕಾರ್ಮಿಕರ ಹಿತರಕ್ಷಣೆ ಹಾಗೂ ಆರೋಗ್ಯದ ಕುರಿತು ಮಾತನಾಡಿದರು.
ಕಲಬುರಗಿ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಲಕ್ಷೀಕಾಂತ ಪಾಟೀಲ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಕೊರೋನಾ ವೈರಸ್ (ಕೋವಿಡ್-19) ಕುರಿತು ಕಾರ್ಮಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಕುರಿತು ಮಾಹಿತಿ ನೀಡಿದರು.
ಕಲಬುರಗಿ ಮಲಕರೆಡ್ಡಿ ಹೋಮಿಯೋಪಥಿಕ ವೈದ್ಯಕೀಯ ಮಾಹಾವಿದ್ಯಾಲಯದ ಅಧೀಕ್ಷಕ ಡಾ. ರಾಜೇಂದ್ರ ಪಾಟೀಲ ಮಾತನಾಡಿ, ಆಯುಷ್ ಇಲಾಖೆಯಿಂದ ನೀಡಲಾದ ಆರ್ಸೆನಿಕ ಅಲ್ಟಮ್-30 ಮಾತ್ರೆ ಕಾರ್ಮಿಕರು ಯಾವ ರೀತಿಯಾಗಿ ಸೇವಿಸಬೇಕು ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕುರಿತು ಕಾರ್ಮಿಕರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಕಲ್ಪ ಸ್ವಸಹಾಯ ಸದಸ್ಯರಾದ ಡಾ. ಎಸ್.ಎಸ್. ಪಾಟೀಲ್, ಬಸವರಾಜ ಕಾಂತಾ, ಭಗವಂತರಾಯ ಕಲಬುರಗಿ, ನಾಗರಾಜ ಬಿರಾದಾರ, ಸಂತೋಷ ಕುಲಕರ್ಣಿ, ಶಿವಾನಂದ ಕಲಶೆಟ್ಟಿ, ಶಿವುಕುಮಾರ ಪಾಟೀಲ್, ವಿಶ್ವನಾಥ ರೆಡ್ಡಿ, ರಾಜಕುಮಾರ ಕೋರಿ ಸೇರಿದಂತೆ ಜನ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 50 ಹೆಚ್ಚು ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಜರ ಹಾಗೂ ಆರ್ಸೆನಿಕ್ ಅಲ್ಬಂ-30 ಮಾತ್ರೆಗಳನ್ನು ವಿತರಿಸಲಾಯಿತು. ಸಂತೋಷ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಬಿರಾದಾರ ಸ್ವಾಗತಿಸಿದರು. ಕೊನೆಯಲ್ಲಿ ವೈಜನಾಥ ಝಳಕಿ ಅವರು ವಂದಿಸಿದರು.