ಹೊಸದಿಗಂತ ವರದಿ, ಕಲಬುರಗಿ:
ಕಲ್ಯಾಣ ಕನಾ೯ಟಕದ ಕೇಂದ್ರ ಭಾಗವಾದ ಕಲಬುರಗಿ ಜಿಲ್ಲೆಗೂ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕೆಂದು ಮತ್ತೊಮ್ಮೆ ಜಿಲ್ಲೆಯ ಸೇಡಂ ತಾಲೂಕಿನ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಪುನರುಚ್ಚಾರ ಮಾಡಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಹಿತದೃಷ್ಟಿಯಿಂದ ಈ ಭಾಗಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಅವಶ್ಯಕತೆ ಇದೆ ಎಂದರು.
ಗ್ರಾಪಂ ಚುನಾವಣೆ ನಂತರ ಸಂಸದರ ನೇತೃತ್ವದಲ್ಲಿ ಸಿಎಂ ಬಳಿಗೆ ನಿಯೋಗ ಕರೆದುಕೊಂಡು ಹೋಗಿ ಮನವಿ ಸಲ್ಲಿಸಲಾಗುವುದು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಗಾಗಿ ಸಂಪುಟದಲ್ಲಿ ಪ್ರಾತಿನಿಧ್ಯ ಕೋರಿ ನಿಯೋಗವನ್ನು ರಾಜ್ಯದ ಮುಖಂಡರಿಗೆ, ರಾಷ್ಟ್ರೀಯ ಮುಖಂಡರಿಗೆ ಹಾಗೂ ಸಿಎಂ ಅವರಿಗೆ ಭೇಟಿ ಮನವರಿಕೆ ಮಾಡಿ ಕೊಡುತ್ತೇವೆ ಎಂದು ಹೇಳಿದರು.
ಪ್ರಿಯಾಂಕ್ ಖಗೆ೯,ಗೆ ತಿರುಗೇಟು
ರಾಜ್ಯಸರ್ಕಾರ ಕೋಮಾ ದಲ್ಲಿದೆ ಎಂಬ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಶಾಸಕ ರಾಜಕುಮಾರ್ ಪಾಟೀಲ್ ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಮಾತಿನ ಚಪಲ ತೀರಿಸಿಕೊಳ್ಳಲು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದರು.
ಕೊರೊನಾದಿಂದ ಇಡೀ ಜಗತ್ತೇ ಆರ್ಥಿಕ ಸಂಕಷ್ಟದಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಆದಾಗ್ಯೂ ಯಾವುದೇ ಅನುದಾನ ಕಟ್ ಮಾಡದೆ ಯೋಜನೆಗಳನ್ನು ಮುಂದುವರಿಸಲು ಸಿಎಂ ಮುಂದಾಗಿದ್ದಾರೆ ಇದನ್ನು ಅವರು ಅಥ೯ಮಾಡಿಕೊಳ್ಳದೆ,
ಇಲ್ಲಸಲ್ಲದ ಆರೋಪಗಳನ್ನು ಮಾಡುವುದೆ ಅವರ ಕೆಲಸವಾಗಿದೆ ಎಂದರು.
ವಿರೋಧ ಪಕ್ಷದಲ್ಲಿರುವ ಪ್ರಿಯಾಂಕ್ ಖರ್ಗೆ ಅವರಿಗೆ ವಿರೋಧಿಸುವುದಷ್ಟೇ ಗೊತ್ತು, ಕೇವಲ ಮಾಧ್ಯಮಗಳ ಮುಂದೆ ಮಾತಿನ ಚಪಲ ತೀರಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.