Wednesday, August 10, 2022

Latest Posts

ಕಲಬುರಗಿ ಶ್ರೀ ಮಾಧವ ಗೋಶಾಲೆಯ ವಾರ್ಷಿಕೋತ್ಸವ: ಗೋಪೂಜೆ ಮೂಲಕ ಆಚರಣೆ

ಹೊಸ ದಿಗಂತ ವರದಿ, ಕಲಬುರಗಿ:

ಶ್ರೀ ಮಾಧವ ಗೋಶಾಲೆಯ ನಾಲ್ಕನೇ ವಾರ್ಷಿಕೋತ್ಸವವನ್ನು ಗೋಪೂಜೆ ಹಮ್ಮಿಕೊಳ್ಳುವುದರ ಮೂಲಕ ಆಚರಿಸಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ಉತ್ತರ ಪ್ರಾಂತದ ಮಾನ್ಯ ಸಂಘಚಾಲಕರಾದ ಖಗೇಶನಜಿ ಪಟ್ಟಣ ಶೆಟ್ಟಿಯವರು ಮಾತನಾಡಿ, ಶ್ರೀ ಮಾಧವ ಗೋಶಾಲೆ ಸಮಾಜದಲ್ಲಿ ಜಾಗೃತಿ ಹಾಗು ಪ್ರೇರಣೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.
ಹಿಂದಿನಿಂದ ಗೋವು ನಮ್ಮ ಜೀವನದ ಕೇಂದ್ರಬಿಂದುವಾಗಿದ್ದು ಹಾಲಿಗಾಗಿ ಅನೇಕರು ಗೋಪಾಲನೆಯಲ್ಲಿ ತೊಡಗಿದ್ದಾರೆ ಆದರೆ ಶ್ರೀ ಮಾಧವ ಗೋಶಾಲೆ ವಯಸ್ಸಾದ, ರೋಗಗ್ರಸ್ತ, ನಿರಾಶ್ರಿತ ಗೋವುಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿದೆ. ಗೋಶಾಲೆ ತಾತ್ಕಾಲಿಕ ವ್ಯವಸ್ಥೆಯಾಗಿದ್ದು ನಾವೆಲ್ಲರೂ ಕೊನೆಯುಸಿರಿರುವ ತನಕ ಗೋವುಗಳನ್ನು ನಮ್ಮ ಜೊತೆಯಲ್ಲೇ ಇಟ್ಟು ಅವುಗಳ ಸೇವೆಗಯ್ಯಬೇಕು ಎಂದು ಹೇಳಿದರು.
ಶ್ರೀ ಮಾಧವ ಗೋಶಾಲೆ ನಾಲ್ಕು ವರ್ಷಗಳ ಹಿಂದೆ ಸಂಕ್ರಾಂತಿಯ ದಿನದಂದು ಆರಂಭವಾಗಿ ತನ್ನ ಗುಣಮಟ್ಟದ ಸೇವೆಗಾಗಿ ಕೆಲ ದಿನಗಳ ಹಿಂದೆ ಐ.ಎಸ್.ಓ 9001-2015 ಪ್ರಮಾಣ ಪತ್ರ ಪಡೆದಿದೆ, ಈ ಪ್ರಮಾಣಪತ್ರ ಪಡೆದಿರುವ ರಾಜ್ಯದ ಎರಡನೆಯ ಗೋಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹತ್ತು ಹಾಸಿಗೆಯ ಪಂಚಗವ್ಯ ಚಿಕಿತ್ಸಾ ಕೇಂದ್ರ, ಹತ್ತು ಕೊಠಡಿಗಳ ರೈತರ ವಸತಿ ಗೃಹ ಪ್ರಾರಂಭಿಸುವ ಮೂಲಕ ಬಡ ಜನರಿಗೆ ಚಿಕಿತ್ಸೆ ಮತ್ತು ಗೋ ಆಧಾರಿತ ಕೃಷಿಯ ಕುರಿತು ಪ್ರಶಿಕ್ಷಣ ನೀಡುವ ಉದ್ದೇಶ ಹೊಂದಿದೆ. ಇನ್ನೆರಡು ವರ್ಷಗಳಲ್ಲಿ ಗೋಶಾಲೆಯಲ್ಲಿ ಬಡ ಹೆಣ್ಣು ಮಕ್ಕಳಿಗಾಗಿ ಗುರುಕುಲ ಪ್ರಾರಂಭಿಸುವುದರ ಮೂಲಕ ಯೋಗ, ಆಯುರ್ವೇದ, ಪಂಚಗವ್ಯ ಚಿಕಿತ್ಸೆ, ಗೋ ಆಧಾರಿತ ಕೃಷಿ, ತೋಟಗಾರಿಕೆ, ಗುಡಿ ಕೈಗಾರಿಕೆ ಇತ್ಯಾದಿ ಪಾರಂಪರಿಕ ಜ್ಞಾನ ನೀಡಿ ಮುಂಬರುವ ವರ್ಷಗಳಲ್ಲಿ ಈ ಭಾಗದ ಮಾತೃಶಕ್ತಿಗೆ ಸ್ವಾವಲಂಬಿ ಜೀವನ ನಡೆಸುವಂತೆ ಮಾಡಲು ಯೋಜನೆ ರೂಪಿಸಲಾಗಿದೆ.
ಗೋವಿನ ಕುರಿತಾಗಿ ಆಧ್ಯಾತ್ಮಿಕ, ವೈಜ್ಞಾನಿಕ, ಪೌರಾಣಿಕ, ಆರ್ಥಿಕ, ಆರೋಗ್ಯ ಈ ಎಲ್ಲಾ ವಿಷಯಗಳ ಕುರಿತು ಪುಸ್ತಕಗಳ ಒಂದು ಬೃಹತ್ ಗ್ರಂಥಾಲಯ ಆರಂಭಿಸುವ ಉದ್ದೇಶವೂ ಗೋಶಾಲೆ ಹೊಂದಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss