Wednesday, August 10, 2022

Latest Posts

ಕಲೆಗಾಗಿ ಜೀವನ ಮುಡುಪಿಟ್ಟ ತಮಟೆ ಕಲಾವಿದಗೆ ಒಲಿದು ಬಂತು ರಾಜ್ಯಪ್ರಶಸ್ತಿ

ಹೊಸ ದಿಗಂತ ವರದಿ, ರಾಮನಗರ:

ದೇವರ ಮೆರವಣಿಗೆಯಿರಲಿ, ಸಾವಿನ ಯಾತ್ರೆಯಿರಲಿ ತಮಟೆ ಬಾರಿಸುವ ಮೂಲಕ ಎಲ್ಲರ ಮನಗೆದಿದ್ದ ತಾಲೂಕಿನ ಬ್ರಹ್ಮಣೀಪುರ ಗ್ರಾಮದ 70ರ ಪ್ರಾಯದ ನೈಜ ಜಾನಪದ ಕಲಾವಿದನ ಮುಡಿಗೀಗ ಜಾನಪದ ಅಕಾಡೆಮಿಯ ರಾಜ್ಯಪ್ರಶಸ್ತಿಯ ಗರಿ ಲಭಿಸಿದೆ.
ರಾಜ್ಯ ಜಾನಪದ ಅಕಾಡೆಮಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಾಮನಗರ ಜಿಲ್ಲೆಯಿಂದ ತಾಲೂಕಿನ ಬ್ರಹ್ಮಣೀಪುರ ಗ್ರಾಮದ ತಿಮ್ಮಯ್ಯ ಅವರ ಹೆಸರು ಸೇರಿದ್ದು, ಎಲೆ ಮರೆ ಕಾಯಿಯಂತೆ ಕಲಾ ಸೇವೆ ಮಾಡಿಕೊಂಡು ಬಂದಿದ್ದ ಸಾಧಕ ಈ ಪ್ರಶಸ್ತಿಗೆ ಭಾಜನರಾಗಿರುವುದು ತಾಲೂಕಿನ ಜಾನಪದ ಕಲಾವಿದರಲ್ಲಿ ಸಂತಸ ಮೂಡಿಸಿದೆ. ತನ್ನ 15ನೇ ವಯಸ್ಸಿನಲ್ಲಿ ತಂದೆ ಹೊಟ್ಟಯ್ಯ ಅವರಿಂದ ಕಲಿತ ಟಮಟೆ ಕಲೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊoಡಿರುವ ತಿಮ್ಮಯ್ಯ, ಗ್ರಾಮದಲ್ಲಿ ನಡೆಯುವ ಸಣ್ಣ ಮೆರವಣಿಯಿಂದ ಹಿಡಿದು ದಸರಾ ಮೆರವಣಿಗೆ ವರೆಗೆ ತಮ್ಮ ತಮಟೆ ಕಲೆಯನ್ನು ಪ್ರದರ್ಶಿಸಿದ್ದಾರೆ. ತನ್ನ ಜೀವನದ 50 ವರ್ಷಗಳಿಗೂ ಹೆಚ್ಚು ಕಾಲ ಟಮಟೆ ಕಲೆಗೆಗಾಗಿ ಜೀವನವನ್ನು ಮುಡುಪಾಗಿಟ್ಟಿರುವ ತಿಮ್ಮಯ್ಯ, ಶಾಲೆಗೆ ಹೋಗಿ ಅಕ್ಷರ ಕಲಿತಿಲ್ಲವಾದರೂ, ತಮ್ಮ ತಮಟೆ ಕಲೆಯನ್ನು ನೂರಾರು ಮಂದಿಗೆ ಕಲಿಸುವ ಮೂಲಕ ಯುವಕರ ಗುರುವೆನಿಸಿಕೊಂಡಿದ್ದಾರೆ. ಇಂದಿಗೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಯುವಕರಿಗೆ ತಮಟೆ ಬಾರಿಸುವ ಕಲೆಯನ್ನು ಕಲಿಸುತ್ತಾ ಬಂದಿದ್ದಾರೆ.

ಬಡತನದಲ್ಲಿ ಅರಳಿದ ಪ್ರತಿಭೆ
ತಮಟೆ ಬಾರಿಸುವುದನ್ನು ಪ್ರವೃತ್ತಿಯಾಗಿಸಿಕೊಂಡಿರುವ ತಿಮ್ಮಯ್ಯ, ವಿವಿಧ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕರೆ ಟಮಟೆ ಬಾರಿಸಲು ಹೋಗುತ್ತಾರೆ. ಇಲ್ಲವಾದಲ್ಲಿ ಕೂಲಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಇವರು ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಹೊಂದಿದ್ದು, ಪುತ್ರಿಗೆ ವಿವಾಹವಾಗಿದ್ದರೆ ಪುತ್ರ ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪತ್ನಿ ಕೂಲಿ ಕೆಲಕ್ಕೆ ಹೋಗುತ್ತಾರೆ.

ಕಲಾವಿದನಿಗೆ ಇಲ್ಲ ಮಾಶಾಸನ
ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡುವ ಮಾಶಾಸನವನ್ನು ಈ ಎಲೆಮರೆ ಕಾಯಿಯಂತಿರುವ ಜಾನಪದ ಕಲಾವಿದನಿಗೆ ನೀಡದಿರುವುದು ಇಲಾಖೆಯ ವೈಫಲ್ಯವೇ ಸರಿ. ಈ ಇಳಿವಯಸ್ಸಿನಲ್ಲೂ ಜೀವನೋಪಾಯಕ್ಕೆ ಕೂಲಿಯನ್ನೇ ನೆಚ್ಚಿಕೊಳ್ಳ ಬೇಕಾದ ಪರಿಸ್ಥಿತಿ ಈ ಕಲಾವಿದನದ್ದಾಗಿದೆ. ಇನ್ನು ತನ್ನ ತಂದೆಯ ಕಾಲದ ಹಳೆಯ ಮನೆಯಲ್ಲಿ ಇವರು ವಾಸಿಸುತ್ತಿದ್ದು, ಮನೆ ಸಹ ಅಲ್ಲಲ್ಲಿ ಶಿಥಿಲ ಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss