ಮಂಗಳೂರು: ಕೇರಳದ ಕಲ್ಲಿಕೋಟೆಯ ಕರಿಪುರ ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ದುರಂತದಲ್ಲಿ ಮೃತಪಟ್ಟಿರುವ ಪೈಲಟ್ ಕ್ಯಾಪ್ಟನ್ ದೀಪಕ್ ವಸಂತ ಸಾಥೆ ಅವರು ಈ ಹಿಂದೆ ಮಂಗಳೂರು ಏರ್ ಇಂಡಿಯಾ ಬೇಸ್ನಲ್ಲಿಯೂ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು.
ಮಂಗಳೂರಿನಲ್ಲಿ 2015-16 ಅವಧಿಯಲ್ಲಿ 15 ತಿಂಗಳ ಕಾಲ ಸೇವೆ ಸಲ್ಲಿಸಿದ್ದ ಸಾಥೆ ಅವರು ಈ ಅವಧಿಯಲ್ಲಿ ನಗರದ ಕದ್ರಿ ಪಾರ್ಕ್ ಬಳಿಯ `ನಾಗಿ’ ಹೆಸರಿನ ಅಪಾರ್ಟ್ಮೆಂಟ್ನಲ್ಲಿ ಪತ್ನಿಯ ಜತೆ ವಾಸವಾಗಿದ್ದರು.
ದೀಪಕ್ ವಸಂತ ಸಾಥೆ ಅವರು ಸ್ನೇಹಮಯಿ ವ್ಯಕ್ತಿತ್ವದವರಾಗಿದ್ದು, ತಮ್ಮ ಸರಳ ವ್ಯಕ್ತಿತ್ವದಿಂದಲೇ ಅಪಾರ್ಟ್ಮೆಂಟ್ನವರೊಂದಿಗೆ ಆಪ್ತರಾಗಿದ್ದರು ಎಂದು ಅಪಾರ್ಟ್ಮೆಂಟ್ನ ನಿವಾಸಿಗಳು ಸಾಥೆ ಅವರ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.