ಮಡಿಕೇರಿ: ಮಂಗಳೂರಿನಿಂದ ಕುಶಾಲನಗರಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದ ಘಟನೆ ಮಡಿಕೇರಿ- ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯ ಬೋಯಿಕೇರಿಯಲ್ಲಿ ನಡೆದಿದೆ. ಲಾರಿ ಚಾಲಕ ಕಲೀಂ ಮತ್ತು ಸಹಾಯಕ ಚಾಲಕ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಸನ ಮೂಲದ ಲಾರಿಯಲ್ಲಿ ಮಂಗಳೂರು ಬಂದರಿನಿಂದ ಕೈಗಾರಿಕಾ ಇದ್ದಿಲನ್ನು ತುಂಬಿಕೊಂಡು ಕುಶಾಲನಗರದ ಕಡೆಗೆ ಸಾಗಿಸಲಾಗುತ್ತಿತ್ತು. ಈ ಸಂದರ್ಭ ಲಾರಿಯನ್ನು ಸಹಾಯಕ ಚಾಲಕ ಚಲಾಯಿಸುತ್ತಿದ್ದು, ಶುಕ್ರವಾರ ರಾತ್ರಿ ೧೦.೩೦ರ ಸಮಯಕ್ಕೆ ಬೊಯಿಕೇರಿ ಇಳಿಜಾರಿನ ರಸ್ತೆಯಲ್ಲಿ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಮುಂಬದಿಯಿಂದ ಬರುತ್ತಿದ್ದ ಬೇರೊಂದು ಲಾರಿಗೆ ಡಿಕ್ಕಿ ಹೊಡೆದಿದೆ.
ಈ ಸಂದರ್ಭ ಲಾರಿಯ ಮೈನ್ ಆಕ್ಸಿಲ್ ತುಂಡಾಗಿದ್ದು, ನಿಯಂತ್ರಣಕ್ಕೆ ಬಾರದ ಲಾರಿ ಹೆದ್ದಾರಿ ಬದಿಗೆ ಮಗುಚಿಕೊಂಡಿದೆ. ಇದಕ್ಕೂ ಮುನ್ನ ಮನೆಯ ಮುಂದೆ ನಿಲ್ಲಿಸಿದ್ದ ಡಸ್ಟರ್ ಕಾರಿಗೂ ಗುದ್ದಿದ್ದು, ಕಾರಿನ ಹಿಂಬದಿಗೆ ಹಾನಿಯಾಗಿದೆ. ಲಾರಿ ಮನೆಯ ಮುಂದೆಯೇ ಮಗುಚಿ ಬಿದ್ದಿದನ್ನು ಕಂಡು ನಿದ್ದೆಯಲ್ಲಿದ್ದ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಅಪಘಾತದಲ್ಲಿ ಲಾರಿ ಚಾಲಕ ಮತ್ತು ಸಹಾಯಕನ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸ್ತುತ ಲಾರಿ ಅಪಘಾತವಾದ ಸ್ಥಳ ರಾಷ್ಟ್ರೀಯ ಹೆದ್ದಾರಿಯ ಬ್ಲಾಕ್ಸ್ಪಾಟ್ (ಅಪಘಾತ ವಲಯ) ಆಗಿದ್ದು, ಈಗಾಗಲೇ ನೂರಾರು ಸರಕು ಲಾರಿಗಳು ಈ ಸ್ಥಳದಲ್ಲಿ ಉರುಳಿ ಬಿದ್ದಿವೆ. ಈ ಹಿನ್ನಲೆಯಲ್ಲಿ ಬ್ಲಾಕ್ ಸ್ಪಾಟ್ ಸ್ಥಳದಲ್ಲಿ ಸೂಕ್ತ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.