ಹೊಸ ದಿಗಂತ ವರದಿ, ಮಂಡ್ಯ:
ಪಾಂಡವಪುರ ತಾಲೂಕು ಚಿನಕುರಳಿ ಹಾಗೂ ಹೊನಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಕಲ್ಲು ಗಣಿಗಾರಿಕೆ ಸಂಬಂಧಿಸಿದಂತೆ 26 ಕೋಟಿ ರೂ. ರಾಜಧನ ವಸೂಲಾತಿಗೆ ಕ್ರಮ ವಹಿಸುವಂತೆ ಸಂಸದೆ ಸುಮಲತಾ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿನಕುರಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 22.50 ಕೋಟಿ ಹಾಗೂ ಹೊನಗಾನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 6.52 ಕೋಟಿ ಸೇರಿದಂತೆ ಒಟ್ಟಾರೆ 26 ಕೋಟಿ ರೂ. ರಾಜಧನ ವಸೂಲಿಯಲ್ಲಿ ಅಧಿಕಾರಿಗಳು ಹಿಂದೆ ಬಿದ್ದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲೆಯ ಪಾಂಡವಪುರ ತಾಲೂಕು ಬೇಬಿ ಬೆಟ್ಟ, ಶ್ರೀರಂಗಪಟ್ಟಣ ಹಾಗೂ ಇತರೆ ತಾಲೂಕುಗಳಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ, ಅನುಮತಿ ನೀಡಿರುವುದು ಸೇರಿದಂತೆ ಇತರೆ ಕಲ್ಲು ಗಣಿಗಾರಿಕೆಯಿಂದ ರೈತರು ಮತ್ತು ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದೆ ಸುಮಲತಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪ ಉತ್ತರಿಸಿ, ಕೆ.ಆರ್.ಎಸ್. ಸುತ್ತಮುತ್ತಲ 5 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಅನುಮತಿ ರದ್ದುಪಡಿಸಲಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮವಾಗಿ ನಡೆಯುತ್ತಿದ ಶೇ. 70 ರಿಂದ 80ರಷ್ಟು ಗಣಿಗಾರಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ರಾತ್ರಿ ವೇಳೆ ಗಣಿ ಚಟುವಟಿಕೆ ನಡೆಸುತ್ತಿರುವ ಬಗ್ಗೆಯೂ ಮಾಹಿತಿ ಬಂದಿದ್ದು, ರಾತ್ರಿ ವೇಳೆಯಲ್ಲಿ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಈಗಾಗಲೇ 400 ಲಾರಿಗಳು, 30 ರಿಂದ 40 ಹಿಟಾಚಿಗಳು ಸೇರಿದಂತೆ ಇತರೆ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ನಮಗೆ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ಸಮರ್ಪಕವಾಗಿ ದೊರೆಯದ ಕಾರಣ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.