Wednesday, August 10, 2022

Latest Posts

ಕಲ್ಲು ಬಂಡೆಗಳ ಜಾಗ ಅಕ್ರಮ ಲೀಸ್‌ಗೆ ಕೊಟ್ಟ ಭೂವಿಜ್ಞಾನಿ: ಆರೋಪ

ಹೊಸ ದಿಗಂತ ವರದಿ, ಕೋಲಾರ:

ಜಿಲ್ಲೆಯ ಭೂ-ವಿಜ್ಞಾನಿ ಷಣ್ಮುಗ ಹಾಲಿ ಲೀಸುದಾರರ ಒಡೆತನದಲ್ಲಿದ್ದ ಕಲ್ಲು ಬಂಡೆ ಜಾಗಗಳನ್ನು ಬ್ಲಾಕ್‌ಗಳಾಗಿ ವಿಂಗಡಿಸಿ ಪ್ರಭಾವಿ ರಾಜಕಾರಣಿಗಳು, ಬಂಡವಾಳ ಶಾಹಿಗಳು ಹಾಗೂ ರೆವಿನ್ಯೂ ಅಧಿಕಾರಿಗಳ ಸಂಬಂಧಿಕರಿಂದ ಅಪಾರ ಹಣ ಪಡೆದು ಅಕ್ರಮವಾಗಿ
ಲೀಸಿಗೆ ಕೊಟ್ಟಿದ್ದಾರೆ ಎಂದು ರಾಜ್ಯ ಕ್ವಾರಿ ಗುತ್ತಿಗೆದಾರರ ಮತ್ತು ವೃತ್ತಿಪರ ಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ಬೆಳ್ಳೂರು ಆಂಜನಪ್ಪ
ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು, ದಿನ್ನೆ ಹೊಸಹಳ್ಳಿ, ದಾನವಹಳ್ಳಿ, ಬೈರಸಂದ್ರ, ಚಾಕರಸನಹಳ್ಳಿ, ವಲ್ಲಬ್ಬಿ ಹಾಗೂ ಚೌಡದೇನಹಳ್ಳಿ ಗ್ರಾಮಗಳಿಗೆ ಸೇರಿದ ಎಸ್ಟಿ, ಎಸ್ಸಿ ಹಾಗೂ ಹಿಂದುಳಿದ 400 ಕುಟುಂಬಗಳು ಗಣಿ ಮತ್ತು ಭೂ-ವಿಜ್ಞಾನ ಇಲಾಖೆಯಿಂದ 1994 ರಿಂದ ಲೀಸಿಗೆ ಪಡೆದು ವೃತ್ತಿಪರರಾಗಿ ಕಲ್ಲು ಬಂಡೆ ಕೆಲಸ ಮಾಡಿ ಜೀವನ ಸಾಗುಸುತ್ತಿರುವ ಬಡ ಕೂಲಿ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖನಿಜ ಕಾನೂನು ರೀತಿ ಲೀಸನ್ನು ಕಾಲ ಕಾಲಕ್ಕೆ ನಿಯಮಾನುಸಾರ ನವೀಕರಣ ಮಾಡಿಕೊಂಡು ಇಲ್ಲಿಯವರೆಗೂ ತಾವೇ ಸ್ವತಃ ಗಣಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಸರಕಾರ ನಿಗಧಿ ಪಡಿಸಿದ ಎಕರೆವಾರು ತೆರಿಗೆ ಪಾವತಿಸಿ ಕೆಲಸ ಮಾಡುತ್ತಿರುವ ಬಡ ವರ್ಗದ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಸರಕಾರ 1994 ರ ಖನಿಜ ನಿಯಮಗಳಲ್ಲಿ ಕೆಲವು ರಿಯಾಯಿತಿ ಘೋಷಣೆ ಮಾಡಿ 2016ರಂದು ಅಧಿಕೃತ ಪ್ರಕಟಣೆಯಲ್ಲಿ ರಾಜ್ಯ ಸರಕಾರದ ಖನಿಜ ನಿಯಮದ ಉಪ-ನಿಯಮ ೩ಎಫ್ ಮತ್ತು 8ಎ(2) ರಂತೆ ಹಾಲಿ ಲೀಸುದಾರರ ಅವಧಿಯನ್ನು 10 ವರ್ಷಗಳಿಂದ 30
ವರ್ಷಕ್ಕೆ ನವೀಕರಣ ಮಾಡಿಕೊಳ್ಳಲು ಅವಕಾಶ ಮಾಡಿ ಕೊಡಲಾಗಿದೆ.
ಆದರೂ, ಭೂ-ವಿಜ್ಞಾನಿ ಷಣ್ಮುಗ ಅವರು ಹಣ ಮಾಡುವ ದುರುದ್ದೇಶದಿಂದ ಹಾಲಿ ಲೀಸುದಾರರಿಗೆ ನವೀಕರಣ ಮಾಡದೆ ಬಂಡವಾಳ ಶಾಹಿಗಳಿಗೆ ಅಕ್ರಮವಾಗಿ ಲೀಸಿಗೆ ಕೊಟ್ಟಿದ್ದಾರೆ ಎಂದು ದೂರಿದರು.
ಹಳೆಯ ಲೀಸನ್ನು ನವೀಕರಣ ಮಾಡಬೇಕಾದರೆ ಎಕರೆವಾರು 15 ರಿಂದ 20ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಿಬ್ಬಂದಿಗಳನ್ನು  ಹಣ ವಸೂಲಿಗೆ
ಮಧ್ಯವರ್ತಿಗಳಾಗಿ ನಿಯೋಜಿಸಿ ಹಾಲಿ ಲೀಸುದಾರರ ಕಲ್ಲು ಗಣಿ ಕೆಲಸವನ್ನು ತಡೆದಿದ್ದಾರೆ.
ಗಣಿ ಪ್ರದೇಶವನ್ನು ವಶಕ್ಕೆ ಪಡೆದು ಸರ್ವೇ ಮಾಡಿ 9 ಬ್ಲಾಕ್ ಗಳಾಗಿ ವಿಂಗಡಣೆಮಾಡಿ, ಹಣವಂತರಿಗೆ ಮತ್ತು ಅಧಿಕಾರಿ ಸಂಬಂಧಿಗಳಿಗೆ ಅಪಾರ ಹಣ ಪಡೆದು ಅಕ್ರಮವಾಗಿ ಹಂಚಿಕೆ ಮಾಡಿ, ಹಳೆಯ ಲೀಸುದಾರರು ಕೆಲಸ ಮಾಡಿದರೆ ಅರೆಸ್ಟ್ ಮಾಡಿ ಜೈಲಿಗೆ ಕಲಿಸುತ್ತೇನೆ ಎಂದು ಬೆದರಿಸುತ್ತಾರೆ. ಆದ್ದರಿಂದ 400 ಕುಟುಂಬಗಳು ಕೆಲಸ ಕಳೆದುಕೊಂಡು ಆದಾಯವಿಲ್ಲದೆ ಸಂಕಷ್ಟದಲ್ಲಿದರುವ ಇವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಕೂಡಲೇ ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಿ, ಮೊದಲಿನಿಂದಲೂ ಲೀಸು ಪಡೆದಿರುವ ಗುತ್ತಿಗೆದಾರರ ಹಾಗೂ ಕೂಲಿ ಕಾರ್ಮಿಕರ ರಕ್ಷಣೆಗೆ ಬಂದು, ಭ್ರಷ್ಟ ಭೂ-ವಿಜ್ಞಾನಿ ಷಣ್ಮುಗ ಹಾಗೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ, ಗಣಿ ಇಲಾಖೆಯವರು ಅಕ್ರಮವಾಗಿ ಬ್ಲಾಕ್ ಗಳಾಗಿ ವಿಂಗಡಿಸಿ ಅಪಾರ ಹಣ ಪಡೆದು ಲಾಟರಿ ಮುಖಾಂತರ ಹಂಚಿಕೆ ಮಾಡಿದ ಲೀಸುಗಳನ್ನು ರದ್ದುಗೊಳಿಸಬೇಕಿದೆ. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ 400 ಕುಟುಂಬಗಳಿಂದ ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಕ್ವಾರಿ ಗುತ್ತಿಗೆದಾರರ ಮತ್ತು ವೃತ್ತಿಪರ ಕಾರ್ಮಿಕರ
ಮಹಾಸಂಘದ ಜಿಲ್ಲಾ ಘಟಕ ಪದಾಧಿಕಾರಿಗಳಾದ ದೇವರಾಜ್, ಮುನಿರಾಜ್, ನಂಜಪ್ಪ ಹಾಗೂ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss