ಬೆಂಗಳೂರು: ಹೆಚ್ಚಿನ ದೇವಾಲಯದಲ್ಲಿ ಕಳ್ಳರು ಒಮ್ಮೆ ಕಳವು ಮಾಡಿದರೆ ಬಳಿಕ ಆ ವಸ್ತುಗಳು ಮರಳಿ ಸಿಗುವುದು ಸಂಶಯ . ಆದರೆ ಇಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಕಳ್ಳತನವಾಗಿದ್ದ ದೇವರ ವಸ್ತುಗಳನ್ನು ಭಾನುವಾರ ದೇವಾಲಯದಲ್ಲಿ ವಾಪಸ್ ತಂದಿಟ್ಟು ಪೂಜೆ ಮಾಡಿ ಹೋಗಿರುವುದು ಅಚ್ಚರಿ ಮೂಡಿದೆ .
ಹೌದು, ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಪಟ್ಟಣದ ತಿಪ್ಪೇರುದ್ರಸ್ವಾಮಿ ದೇವಾಲಯ ಮುಂಭಾಗದಲ್ಲಿ ವಿಜಯ ವೀರಭದ್ರಸ್ವಾಮಿ ದೇವಾಲಯವಿದೆ. ಈ ದೇವಾಲಯ ಶಿಥಿಲಾವಸ್ಥೆ ತಲುಪಿದ್ದರಿಂದ ಹೊಸ ದೇವಾಲಯ ನಿರ್ಮಾಣಕ್ಕಾಗಿ ಶಿಲಾಮೂರ್ತಿ, ಮುಖ ಪದ್ಮ, ದೀಪಗಳು, ಖಡ್ಗ, ಪೀಠ, ಗಂಟೆ, ಪಾದುಕೆ ಸೇರಿದಂತೆ ನಾನಾ ವಸ್ತುಗಳನ್ನು ಈಶ್ವರ ದೇವಾಲಯದ ಆವರಣದಲ್ಲಿಡಲಾಗಿತ್ತು.
ಆದರೆ ನಾಲ್ಕು ತಿಂಗಳ ಹಿಂದೆ ಶಿಲಾ ಮೂರ್ತಿ ಬಿಟ್ಟು ಎಲ್ಲ ವಸ್ತುಗಳನ್ನು ಹೊರಗಿನ ಬೀಗ ಒಡೆದು ಕಳ್ಳರು ಕದ್ದೊಯ್ದಿದ್ದರು. ಆದರೆ ಭಾನುವಾರ ನಸುಕಿನಲ್ಲಿ ಕಳುವಾಗಿದ್ದ ಎಲ್ಲ ವಸ್ತುಗಳನ್ನು ದೇವರ ಮುಂದೆ ಇಟ್ಟು ಹೋಗಿದ್ದಾರೆ. ಕದ್ದು ಒಯ್ದ ವಸ್ತುಗಳನ್ನು ವಾಪಸ್ ತಂದಿರುವ ಕಳ್ಳರ ಈ ನಡೆ ಭಕ್ತರಿಗೆ ಆಶ್ಚರ್ಯ ತಂದಿದೆ.
ಜತೆಗೆ ದೇವರ ಮುಂದೆ ಎರಡು ನಂದಾ ದೀಪಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ. ಕಳುವಾಗಿದ್ದ ಎಲ್ಲ ವಸ್ತುಗಳನ್ನು ಎರಡು ಚೀಲದಲ್ಲಿ ಕಟ್ಟಿ ದೇವರ ಮುಂದೆ ಇಡಲಾಗಿದೆ. ದೀಪ ಹಚ್ಚಿ, ಹೂವುಗಳನ್ನು ಇಟ್ಟು ಪೂಜೆ ಸಲ್ಲಿಸಿರುವ ಕುರುಹುಗಳೂ ದೇವರ ಮುಂದಿವೆ.