ಹೊಸ ದಿಗಂತ ಆನ್ಲೈನ್ ಡೆಸ್ಕ್:
ಕಷ್ಟ ಕಾಲದಲ್ಲಿ ತನಗೆ ಸಹಾಯ ಮಾಡಿದ್ದವರನ್ನು ಬೆಕ್ಕೊಂದು ತನ್ನ ಸಂಸಾರ ಸಮೇತ ಬಂದು ‘ಧನ್ಯವಾದ’ ಹೇಳಿ ಹೋದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ನಡೆದಿರುವುದು ಕೆನಡಾದಲ್ಲಿ. ಅನ್ನಾಹಾರವಿಲ್ಲದೆ ಬೀದಿ ಬದಿಯಲ್ಲಿ ಕಂಗಾಲಾಗಿದ್ದ ಬೆಕ್ಕೊಂದಕ್ಕೆ ಲೆಸಿಯಾನೆ ಎಂಬಾಕೆ ನಿತ್ಯ ಆಹಾರ ತಿನ್ನಿಸುತ್ತಿದ್ದರು. ಅಷ್ಟೇ ಅಲ್ಲ, ಮುದ್ದಾಗಿದ್ದ ಅದಕ್ಕೆ ಅಕ್ಕರೆಯಿಂದ ‘ಉಸಾಗಿ’ ಎಂಬ ಹೆಸರನ್ನೂ ಇಟ್ಟಿದ್ದರು. ಆದರೆ ಒಂದು ದಿನ ‘ಉಸಾಗಿ’ ನಾಪತ್ತೆಯಾಗಿ ಲೆಸಿಯಾನೆಗೆ ಶಾಕ್ ನೀಡಿತ್ತು. ‘ಉಸಾಗಿ’ಯನ್ನು ಬಹಳಷ್ಟು ಹಚ್ಚಿಕೊಂಡಿದ್ದ ಆಕೆ ಬೆಕ್ಕನ್ನು ಹುಡುಕಲು ಮಾಡಿದ ಎಲ್ಲಾ ಪ್ರಯತ್ನ ವಿಫಲವಾಗಿತ್ತು. ಇನ್ನೇನು ಅದು ಮರಳಿ ಬರಲ್ಲ ಎಂದು ನಿರಾಸೆಗೊಳ್ಳುವ ಹೊತ್ತಿಗೇ, ‘ಉಸಾಗಿ’ ತನ್ನ ಆರು ಮರಿಗಳ ಸಹಿತ ಲೆಸಿಯಾನೆ ಮನೆ ಮುಂದೆ ಬಂದು ನಿಲ್ಲುವ ಮೂಲಕ ಆಶ್ಚರ್ಯ ಮೂಡಿಸಿದೆ.
ಪ್ರಾಣಿ ರಕ್ಷಣೆ ಸಂಬಂಧಿಸಿದ ಸಂಘಟನೆಯೊಂದು ಈ ಘಟನೆಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಈಗ ವೈರಲ್ ಆಗುತ್ತಿದೆ.