Tuesday, August 16, 2022

Latest Posts

ಕಸ್ತೂರಿ ರಂಗನ್ ವರದಿಯ ಮರು ಪರಿಶೀಲನೆ ಅಗತ್ಯ: ರವಿಕುಶಾಲಪ್ಪ

ಹೊಸ ದಿಗಂತ ವರದಿ, ಮಡಿಕೇರಿ:

ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ಡಾ.ಕಸ್ತೂರಿ ರಂಗನ್ ಅವರ ವರದಿಯ ಮರು ಪರಿಶೀಲನೆ ಅನಿವಾರ್ಯವಾಗಿದೆ ಎಂದು ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಸಮಿತಿಯ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮಘಟ್ಟ ಪ್ರದೇಶದ ಸಂರಕ್ಷಣೆಯೊಂದಿಗೆ ತಲತಲಾಂತರಗಳಿಂದ ಈ ಭಾಗದಲ್ಲಿ ವಾಸಿಸುತ್ತಿರುವ ಜನರ ರಕ್ಷಣೆಯೂ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಪ್ರದೇಶದ ಗಡಿಯನ್ನು ಗುರುತಿಸುವ ಕಾರ್ಯವಾಗಬೇಕಿದ್ದು, ಪ್ರಸಕ್ತ ಇರುವ ಬಫರ್‍ಝೋನ್ ಪ್ರದೇಶವನ್ನು 10 ಕಿ.ಮೀ.ನಿಂದ ಸೊನ್ನೆ ಕಿ.ಮೀ.ಗೆ ಇಳಿಸಬೇಕಿದೆ. ಅರಣ್ಯದ ಗಡಿಯಲ್ಲಿರುವ ನಿವಾಸಿಗಳ ಸಹಕಾರದಿಂದಲಷ್ಟೇ ಪಶ್ಚಿಮಘಟ್ಟವನ್ನು ಉಳಿಸಲು ಸಾಧ್ಯವಾಗಲಿದ್ದು, ಈ ದಿಸೆಯಲ್ಲಿ ಅರಣ್ಯದಂಚಿನಲ್ಲಿರುವ ಜನವಸತಿ ಪ್ರದೇಶಗಳನ್ನು ಅರಣ್ಯದಿಂದ ಹೊರಗಿಡಬೇಕಿದೆ. ಈ ನೈಜಾಂಶಗಳನ್ನು ಕೇಂದ್ರ್ರ ಮತ್ತು ನ್ಯಾಯಾಲಯಕ್ಕೆ ತಿಳಿಸುವ ಕೆಲಸ ರಾಜ್ಯ ಸರ್ಕಾರದಿಂದ ನಡೆಯಬೇಕಿದ್ದು, ಈ ಸಂಬಂಧ ತಾನು ಸರ್ಕಾರದ ಗಮನ ಸೆಳೆಯುವುದಾಗಿ ನುಡಿದರು.

ಜ.11 ರಂದು ಸಭೆ
ಮಡಿಕೇರಿಯಿಂದ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಕಡಮಕಲ್ಲು ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಳಕೆಯಾದ 12 ಎಕರೆ ಜಾಗಕ್ಕೆ ಬದಲಾಗಿ ಅರಣ್ಯ ಇಲಾಖೆಗೆ 48 ಎಕರೆ ಜಾಗವನ್ನು ಒದಗಿಸಿಕೊಡಲಾಗಿದೆ. ಹೀಗಿದ್ದೂ ರಸ್ತೆಯ ಕುರಿತ ಗೊಂದಲಗಳು ಹಾಗೇ ಉಳಿದಿದ್ದು, ಇದು ಮತ್ತು ದಕ್ಷಿಣ ಕೊಡಗಿನ ಕೂಟಿಯಾಲ ರಸ್ತೆ ಹಾಗೂ ದಬ್ಬಡ್ಕ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜ. 11 ರಂದು ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥದ ಬಗ್ಗೆ ಚರ್ಚಿಸಲಾಗುವುದೆಂದು ಸ್ಪಷ್ಟಪಡಿಸಿದರು.
ಕಾರ್ಯಪಡೆಯ ಮೂಲಕ ಖಾಲಿ ಇರುವ ಪ್ರದೇಶಗಳಲ್ಲಿ ಅರಣ್ಯವನ್ನು ಅಭಿವೃದ್ಧಿ ಪಡಿಸುವ ಬಗ್ಗೆಯೂ ವಿಶೇಷ ಆಸಕ್ತಿ ಹೊಂದಿರುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಕೊಕ್ಕಲೆರ ಅಯ್ಯಪ್ಪ, ಮಡಿಕೇರಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ ಹಾಗೂ ಪಕ್ಷದ ಪ್ರಮುಖ ಕಿಮ್ಮುಡಿರ ಜಗದೀಶ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss