Monday, August 8, 2022

Latest Posts

ಕಾಂಗ್ರೆಸ್ಸಿಗರು ಸೃಷ್ಟಿಸಿದ ಗೋಮಾಂಸ ಹಂಚಿಕೆ ವಿವಾದ: ಕಾಕೋಟುಪರಂಬು ಬಿಜೆಪಿ ಸ್ಥಾನೀಯ ಸಮಿತಿ ಸ್ಪಷ್ಟನೆ

ಹೊಸ ದಿಗಂತ ವರದಿ, ಮಡಿಕೇರಿ:

ಗ್ರಾ.ಪಂ ಚುನಾವಣೆ ಸಂದರ್ಭ ಕಾಕೋಟುಪರಂಬು ಬಿಜೆಪಿ ಸ್ಥಾನೀಯ ಸಮಿತಿಯು ಅಲ್ಪಸಂಖ್ಯಾತರಿಗೆ ಗೋಮಾಂಸ ಹಂಚಿಕೆ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್‍ನ ವಲಯಾಧ್ಯಕ್ಷರು ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಸಂದೇಶವನ್ನು ಹರಿಯಬಿಟ್ಟು ಪಕ್ಷಕ್ಕೆ ಹಾಗೂ ಗ್ರಾಮಸ್ಥರಿಗೆ ಮುಜುಗರ ಉಂಟು ಮಾಡಿದ್ದು, ಈ ಪ್ರಕರಣವನ್ನು ದೇವರ ಸಮ್ಮುಖದಲ್ಲಿ ಇತ್ಯರ್ಥಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಸ್ಥಾನೀಂನೀಯ ಸಮಿತಿ ಮುಖಂಡ ಹಾಗೂ ಗ್ರಾ.ಪಂ. ಸದಸ್ಯ ಮೇವಡ ಗಿರೀಶ್ ಬೋಪಣ್ಣ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಲಯಾಧ್ಯಕ್ಷ ಅನಿಲ್ ಅಯ್ಯಪ್ಪ ಅವರು ಗೋಮಾಂಸ ಹಂಚಿಕೆಯ ಕುರಿತು ಧ್ವನಿಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪಕ್ಷಕ್ಕೆ ಹಾಗೂ ಗ್ರಾಮಸ್ಥರಿಗೆ ಮುಜುಗರ ಉಂಟು ಮಾಡಿದ್ದರು. ಆದರೆ ಅವರ ಈ ಆರೋಪ ಸತ್ಯಕ್ಕೆ ದೂರವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರೆಲ್ಲ ಸೇರಿ ದೇವರ ಮುಂಭಾಗ ಸತ್ಯ ಪ್ರಮಾಣ ಮಾಡಿ ಇತ್ಯರ್ಥಪಡಿಸಿಕೊಳ್ಳಲಾಗಿದ್ದು, ಹಿರಿಯರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅನಿಲ್ ಅಯ್ಯಪ್ಪ ಕ್ಷಮೆಯಾಚಿಸಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಯಾವುದೇ ಪತ್ರಿಕಾ ಹೇಳಿಕೆ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚಿಸದಂತೆ ನಿರ್ಧಾರ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇನ್ನು ಮುಂದೆ ಈ ಸಂದೇಶವನ್ನು ಸಾಮಾಜಿಕ ಜಾಲ ತಾಣದಲ್ಲಿ ರವಾನಿಸಬಾರದೆಂದು ಮನವಿ ಮಾಡಿದರು.
ಸ್ಥಾನೀಯ ಸಮಿತಿ ಸದಸ್ಯೆ ಮೇವಡ ವಶ್ಮಾ ಮಾತನಾಡಿ, ಕಾಂಗ್ರೆಸ್ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವವವರು ಈ ರೀತಿಯ ಹೇಳಿಕೆ ನೀಡುವ ಮೊದಲು ಸತ್ಯಾಸತ್ಯತೆ ಅರಿತುಕೊಳ್ಳಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರುಗಳಾದ ಬಿ.ಎಂ.ಲೋಕೇಶ್ ಹಾಗೂ ಅರೆಯಂಡ ಮೋಹನ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss