Wednesday, August 17, 2022

Latest Posts

ಕಾಂಗ್ರೆಸ್‌ ಟೀಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕೆಲಸಗಳೇ ತಕ್ಕ ಉತ್ತರ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ

ಚಿತ್ರದುರ್ಗ: ಹಲವಾರು ದಶಕಗಳಿಂದಲೂ ಕಗ್ಗಂಟಾಗಿ ಉಳಿದಿದ್ದ ಅನೇಕ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ದಿ ಕೆಲಸಗಳ ಮೂಲಕ ಕಾಂಗ್ರೆಸ್‌ನವರ ವಿರೋಧಕ್ಕೆ ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಹೇಳಿದರು.
ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಒಂದು ವರ್ಷದ ಅವಧಿಯನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಶನಿವಾರ ಸರಳವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಲಿಷ್ಟ ರಾಷ್ಟ್ರಗಳು ಕೊರೋನಾ ವೈರಸ್‌ನಿಂದ ನಲಗುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕೈಗೊಂಡ ಲಾಕ್ ಡೌನ್‌ನಂಥ ದಿಟ್ಟ ನಿರ್ಧಾರಗಳಿಂದ ಭಾರತದಲ್ಲಿ ಕೊರೋನಾ ಹದ್ದುಬಸ್ತಿನಲ್ಲಿದೆ. ಮಾನವ ಸಂಪನ್ಮೂಲಗಳನ್ನು ಕಾಪಾಡುವ ಶಕ್ತಿ ಪ್ರಧಾನಿ ಮೋದಿಗಿರುವುದರಿಂದ ಇಡೀ ವಿಶ್ವವೇ ಮೋದಿರವರಿಂದ ಪಾಠ ಕಲಿಯಬೇಕು ಎಂದು ಹೇಳಿದರು.
ಎರಡು ತಿಂಗಳ ಅವಧಿಯ ಲಾಕ್ ಡೌನ್‌ನಿಂದ ದೇಶಕ್ಕೆ ಅನೇಕ ಸವಾಲುಗಳು ಎದುರಾಗಿದ್ದರೂ ಎದೆಗುಂದದ ಪ್ರಧಾನಿ ಮೋದಿಯವರು ಬಡವರು, ಶ್ರಮಿಕರು, ದೀನದಲಿತರು, ರೈತರು, ಕೃಷಿ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳಲ್ಲಿ ದುಡಿಯುತ್ತಿರುವವರ ನೆರವಿಗಾಗಿ ೨೦ ಲಕ್ಷ ಕೋಟಿ ರೂ.ಗಳನ್ನು ಘೋಷಿಸಿದ್ದಾರೆ. ಇದನ್ನು ಸಹಿಸಿಕೊಳ್ಳಲು ಆಗದ ಕಾಂಗ್ರೆಸ್‌ನವರು ಪ್ರಧಾನಿ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು.
ಕಳೆದ ಎಪ್ಪತ್ತು ವರ್ಷಗಳಿಂದಲೂ ಜಮ್ಮು-ಕಾಶ್ಮೀರ ಅನುಭವಿಸಿಕೊಂಡು ಬರುತ್ತಿರುವ ೩೭೦ ನೇ ವಿಧಿಯನ್ನು ರದ್ದುಪಡಿಸಿ ದಿಟ್ಟತನ ಕೈಗೊಂಡಿರುವುದು ಸುಲಭದ ಮಾತಲ್ಲ. ಅದಕ್ಕಾಗಿ ಒಂದು ವರ್ಷದಲ್ಲಿ ಮೋದಿಯವರು ಮಾಡಿರುವ ಸಾಧನೆ ಕುರಿತು ಪ್ರತಿ ಮನೆ ಮನೆಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದ ಅವರು, ಕಾಂಗ್ರೆಸ್‌ನಿಂದ ದೇಶಕ್ಕೆ ಯಾವ ಅಭಿವೃದ್ದಿಯೂ ಆಗಿಲ್ಲ ಎಂದು ವಿರೋಧಿಗಳ ಟೀಕೆಗೆ ತಿರುಗೇಟು ನೀಡಿದರು.
ಕೊರೋನಾ ಲಾಕ್ ಡೌನ್‌ನಿಂದ ಯಾರೂ ಉಪವಾಸ ಇರಬಾರದೆನ್ನುವ ಕಾರಣಕ್ಕಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಎರಡು ತಿಂಗಳ ರೇಷನ್ ಉಚಿತವಾಗಿ ನೀಡಲಾಗಿದೆ. ದೇಶದೆಲ್ಲೆಡೆ ಕೋಟ್ಯಾಂತರ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. ಕೊರೋನಾ ಹಿಮ್ಮೆಟ್ಟಿಸಲು ನಿರಂತರವಾಗಿ ಶ್ರಮಿಸುತ್ತಿರುವ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತರುಗಳಿಗೆ ಹೂಮಳೆ ಸುರಿಸಿ ಗೌರವಿಸಲಾಗಿದೆ. ಇದೆಲ್ಲಾ ಮೋದಿಯವರ ಸಾಧನೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಧಾನಿಯವರು ಸೂಚಿಸಿರುವ ನಿಯಮಗಳನ್ನು ಕ್ರಮಬದ್ದವಾಗಿ ಪಾಲಿಸಿ ಜಾಗೃತಿಯಿಂದ ಇರುವುದೇ ಕೊರೋನಾ ತಡೆಗೆ ಔಷಧಿ ಎಂದು ನುಡಿದರು.
ಬಿಜೆಪಿ ಸ್ಲಂ ಮೋರ್ಚ ರಾಜ್ಯ ಉಪಾಧ್ಯಕ್ಷ ಸಿದ್ದೇಶ್ ಯಾದವ್ ಮಾತನಾಡಿ, ಕೊರೋನಾ ಹಾವಳಿಯ ಕಾರಣ ಮೋದಿಯವರ ಒಂದು ವರ್ಷದ ಸಾಧನೆಯನ್ನು ಪಕ್ಷದ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕೊರೋನಾ ವೈರಸ್ ವ್ಯಾಪಕವಾಗಿ ಹರಡದಂತೆ ನಿಯಂತ್ರಣದಲ್ಲಿದೆ. ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಸಾಕಷ್ಟು ಈಡೇರಿದೆ. ಆದ್ದರಿಂದ ಮೋದಿಯವರು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿದ್ದಾರೆಂದು ಹೇಳಿದರು.
ನಮ್ಮ ದೇಶದ ಔಷಧಿಗಳು ಜಗತ್ತಿಗೆ ಬೇಕಾಗಿದೆ ಎನ್ನುವ ವಾತಾವರಣ ಸೃಷ್ಟಿಯಾಗಿರುವುದನ್ನು ನೋಡಿದರೆ, ದೇಶದ ಬಗ್ಗೆ ಪ್ರಧಾನಿಗಿರುವ ಕಾಳಜಿ ಎಷ್ಟೆಂಬುದು ಗೊತ್ತಾಗುತ್ತದೆ. ಬಾಲಕರಿಂದ ಹಿಡಿದು ವೃದ್ದರವರೆಗೆ, ಕೃಷಿ, ಆರೋಗ್ಯ, ಶಿಕ್ಷಣಕ್ಕೆ ಸಂಬಂಧಪಟ್ಟ ಅನೇಕ ಜನಪ್ರಿಯ ಯೋಜನೆಗಳನ್ನು ಮೋದಿಯವರು ಮನೆ ಮನೆಗೆ ನೀಡಿದ್ದಾರೆ. ಚಿತ್ರದುರ್ಗ ಕರ್ನಾಟಕಕ್ಕೆ ಕೇಂದ್ರಿಯ ವಿದ್ಯಾಲಯ, ಮೆಡಿಕಲ್ ಕಾಲೇಜು ಮಂಜೂರು ಮಾಡುವುದಾಗಿಯೂ ಪ್ರಧಾನಿ ಆಶ್ವಾಸನೆ ಕೊಟ್ಟಿದ್ದಾರೆ ಎಂದರು.
ಶ್ರಮಿಕ ವರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ೨೦ ಲಕ್ಷ ಕೋಟಿ ರೂ.ಗಳನ್ನು ಘೋಷಿಸಿರುವುದನ್ನು ಕೆಪಿಸಿಸಿ ವಕ್ತಾರರೊಬ್ಬರು ಫೇಸ್‌ಬುಕ್ ಲೈವ್‌ನಲ್ಲಿ ಕೆದಕಿದ್ದಾರೆ. ಎಲ್ಲಿದೆ ೨೦ ಲಕ್ಷ ಎಂದು ಕೇಳಿದ್ದಾರೆ. ಸೂಕ್ತ ವೇದಿಕೆಯಲ್ಲಿ ಬಂದು ಲೆಕ್ಕ ಕೇಳಲಿ, ಅವರಿಗೆ ಕೊಡುತ್ತೇವೆಂದು ಸವಾಲೆಸದ ಸಿದ್ದೇಶ್‌ಯಾದವ್, ಅಧಿಕಾರ ವಿಕೇಂದ್ರ್ರೀಕರಣ ಹೇಗೆ ಮಾಡಬೇಕೆಂಬುದನ್ನು ಮೋದಿಯನ್ನು ನೋಡಿ ಕಾಂಗ್ರೆಸ್‌ನವರು ಪಾಠ ಕಲಿಯಬೇಕೆಂದು ಕುಟುಕಿದರು.
ಬಿಜೆಪಿ ನಗರಾಧ್ಯಕ್ಷ ಶಶಿಧರ್ ಮಾತನಾಡಿ, ದೇಶಕ್ಕೆ ಕಂಟಕವಾಗಿದ್ದ ದೊಡ್ಡ ದೊಡ್ಡ ಸಮಸ್ಯೆಗಳನ್ನು ಪ್ರಧಾನಿ ಮೋದಿಯವರು ಶಾಂತಿಯುತವಾಗಿ ಬಗೆಹರಿಸಿದ್ದಾರೆ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್, ಸರ್ಜಿಕಲ್ ಸ್ಟ್ರೈಕ್, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ ೩೭೦ ರದ್ದು, ಐದು ನೂರು, ಒಂದು ಸಾವಿರ ರೂ.ಗಳನ್ನು ರದ್ದುಮಾಡಿದ್ದು, ಇವೆಲ್ಲಾ ದೊಡ್ಡ ಸಾಧನೆಯಲ್ಲವೇನು ಎನ್ನುವುದನ್ನು ದೇಶದ ಜನ ಮೊದಲು ತಿಳಿದುಕೊಳ್ಳಬೇಕೆಂದರು.
ರೈತ ಮೋರ್ಚ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ, ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್, ಯುವ ಮೋರ್ಚ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಮುಖಂಡರಾದ ಎಂ.ಎ.ಸೇತೂರಾಂ, ಚಂದ್ರಿಕಾ ಲೋಕನಾಥ್, ಶ್ಯಾಮಲಾ ಶಿವಪ್ರಕಾಶ್, ಶಿವಣ್ಣಾಚಾರ್, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ನಗರಸಭೆ ಸದಸ್ಯರಾದ ಅಂಗಡಿ ಮಂಜಣ್ಣ, ಹರೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ ಸ್ವಾಗತಿಸಿದರು. ವಕ್ತಾರ ನಾಗರಾಜ್ ಬೇದ್ರೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಗರದ ೩೦ ನೇ ವಾರ್ಡ್‌ನ ಐವರು ಮಹಿಳಾ ಪೌರ ಕಾರ್ಮಿಕರಿಗೆ ಫುಡ್‌ಕಿಟ್‌ಗಳನ್ನು ವಿತರಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!