Wednesday, July 6, 2022

Latest Posts

ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಆಗ್ರಹ: ಸೋನಿಯಾಗೆ 100 ನಾಯಕರ ಪತ್ರ!

ಹೊಸದಿಲ್ಲಿ: ಕಾಂಗ್ರೆಸ್‌ನಲ್ಲಿ ನಾಯಕತ್ವ ವಿವಾದ ಮತ್ತೆ ಭಾರೀ ಸದ್ದು ಮಾಡಲಾರಂಭಿಸಿದ್ದು, ಇದೀಗ ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ೧೦೦ ಮಂದಿ ಕಾಂಗ್ರೆಸ್ ನಾಯಕರು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾಗೆ ಪತ್ರ ಬರೆದಿರುವ ಅಂಶವೀಗ ಕಾಂಗ್ರೆಸ್‌ನಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ.
ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳಿಂದ ನಾಯಕರು ತೀವ್ರ ಹತಾಶರಾಗಿದ್ದಾರೆ.ಈ ಹಿನ್ನೆಲೆಯಲ್ಲೇ ಪಕ್ಷದ ರಾಜಕೀಯ ನಾಯಕತ್ವ ಬದಲಾವಣೆ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಪಾರದರ್ಶಕತೆ ತರುವಂತೆ ಆಗ್ರಹಿಸಿ ಪಕ್ಷ ಸಂಸದರು ಸೇರಿದಂತೆ ೧೦೦ರಷ್ಟು ಕಾಂಗ್ರೆಸ್ ನಾಯಕರು ಸೋನಿಯಾಗೆ ಪತ್ರ ಬರೆದಿರುವುದಾಗಿ ಪಕ್ಷದಿಂದ ಇತ್ತೀಚೆಗೆ ಮಾನತುಗೊಂಡಿರುವ ಪಕ್ಷದ ವಕ್ತಾರ ಸಂಜಯ್ ಝಾ ಬಹಿರಂಗಪಡಿಸಿದ್ದಾರೆ.
ಪತ್ರ ಸ್ವೀಕರಿಸಿಲ್ಲ:ಕಾಂಗ್ರೆಸ್ ನಾಯಕರು
ಆದರೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಅವರು ಇಂತಹ ಯಾವುದೇ ಪತ್ರ ಬಂದಿಲ್ಲ ಎಂಬುದಾಗಿ ಹೇಳಿಕೊಂಡಿದ್ದು, ಇದು ಮಾಧ್ಯಮ-ಟಿವಿ ಚರ್ಚೆಯ ಮಾರ್ಗದರ್ಶನದಲ್ಲಿ ವಿಶೇಷ ತಪ್ಪು ಮಾಹಿತಿ ಹರಡುವ ಗುಂಪು “ಫೇಸ್‌ಬುಕ್ -ಬಿಜೆಪಿ ನಡುವಣ ಸಂಪರ್ಕ ಕುರಿತ ಗಮನವನ್ನು ಬೇರೆಡೆಗೆ ಸೆಳೆಯಲು ಅಸ್ತಿತ್ವದಲ್ಲಿಲ್ಲದ ಕಾಂಗ್ರೆಸ್ ನಾಯಕರ ಪತ್ರಗಳ ಬಗ್ಗೆ ಕಥೆ ಸೃಷ್ಟಿಸಲಾಗಿದೆ ಎಂಬುದಾಗಿ ಆರೋಪಿಸಿದ್ದಾರೆ. ಇದರ ಹಿಂದೆ ಬಿಜೆಪಿ ಕೈಗೊಂಬೆಗಳು ಇವೆ ಎಂಬುದಾಗಿಯೂ ಆರೋಪಿಸಿದರು.ಪಕ್ಷದ ಇನ್ನೊಬ್ಬ ಕಾರ್ಯದರ್ಶಿ ಪ್ರಣವ್ ಝಾ ಅವರು ಕೂಡಾ “ಪಕ್ಷ ಇಂತಹ ಯಾವುದೇ ಪತ್ರ ಸ್ವೀಕರಿಸಿಲ್ಲ”ಎಂಬುದಾಗಿ ಹೇಳಿಕೆ ನೀಡಿದರು.
ಪತ್ರ ಬರೆಯಲು ಸ್ವಾತಂತ್ರ್ಯ:ಸುಪ್ರಿಯಾ
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಇನ್ನಷ್ಟು ಸಮಜಾಯಿಷಿ ನೀಡಿದ್ದು, “ಪಕ್ಷದಲ್ಲಿ ಆಂತರಿಕ ಪ್ರಜಾತಂತ್ರ ಇದೆ. ಪಕ್ಷವು ಅಂತಹ ನಾಯಕರಿಗೆ ಪಕ್ಷಕ್ಕೆ ಪತ್ರ ಬರೆಯಲು ಮುಕ್ತ ಸ್ವಾತಂತ್ರ್ಯ ನೀಡಿದೆ.ಹಾಗೆಯೇ ಸಿಡಬ್ಲ್ಯೂಸಿ ತನ್ನ ನಾಯಕನ ಆಯ್ಕೆಗೆ ಸೂಕ್ತ ವ್ಯವಸ್ಥೆ
ಹೊಂದಿದೆ “. ಇಂತಹ ನಾಯಕರು ಬಿಜೆಪಿ ಪರವಾಗಿ ಕಾರ್ಯಾಚರಿಸುತ್ತಿದ್ದಾರೆ ಎಂಬ ಸುಪ್ರಿಯಾ ಆರೋಪಿಸಿರುವುದು ಪತ್ರ ಕುರಿತಂತೆ ಇನ್ನಷ್ಟು ಸುಳಿವನ್ನು ಹೊರಹಾಕಿದೆ.
ರಾಜಸ್ತಾನದಲ್ಲಿ ಬಂಡಾಯ ಸಾರಿದ್ದ ಯುವನಾಯಕ ಸಚಿನ್ ಪೈಲಟ್ ಅವರನ್ನು ಬೆಂಬಲಿಸಿದ್ದರೆಂಬ ಕಾರಣಕ್ಕಾಗಿ ಸಂಜಯ್ ಝಾ ಅವರನ್ನು “ಪಕ್ಷ ವಿರೋಧಿ ಚಟುವಟಿಕೆ ಮತ್ತು ಪಕ್ಷದ ಶಿಸ್ತಿನ ಉಲ್ಲಂಘನೆ “ಆರೋಪ ಹೊರಿಸಿ ಇತ್ತೀಚೆಗೆ ಅಮಾನತುಗೊಳಿಸಲಾಗಿತ್ತು.
ಕೈ ನಾಯಕತ್ವ ಬದಲಾವಣೆಗೆ ಆಗ್ರಹಕ್ಕಿದೆ ಹಿನ್ನೆಲೆ
ಕಾಂಗ್ರೆಸ್ ನಾಯಕತ್ವ ಬದಲಾವಣೆ ಮತ್ತು ಸಿಡಬ್ಲ್ಯೂಸಿ ಚುನಾವಣೆಗೆ ಸಂಬಂಸಿ ಕಾಂಗ್ರೆಸ್‌ನಲ್ಲಿ ಪಾರದರ್ಶಕತೆ ಇಲ್ಲವೆಂಬ ಆರೋಪ ಇದೀಗ ಅನೇಕ ಹಿರಿಯ ಕಾಂಗ್ರೆಸ್ ನಾಯಕರಿಂದಲೇ ವ್ಯಕ್ತಗೊಳ್ಳಲಾರಂಭಿಸಿದೆ. ಆದರೆ ಇದಕ್ಕೆ ಸಾಕಷ್ಟು ಹಿನ್ನೆಲೆ ಇದೆ. ಈ ಹಿಂದೆ ಹಿರಿಯ ದಲಿತ ನಾಯಕ ಸೀತಾರಾಮ ಕೇಸರಿ ಅವರನ್ನು ಅತ್ಯಂತ ಅವಮಾನಕಾರಿ ರೀತಿಯಲ್ಲಿ ಅಧ್ಯಕ್ಷ ಸ್ಥಾನದಿಂದ ಇಳಿಸಿ ಸೋನಿಯಾ ಅವರು ಅಧ್ಯಕ್ಷೆಯಾದ ಘಟನೆ ಸೇರಿದಂತೆ ಅನೇಕ ವಿದ್ಯಮಾನಗಳು ಕಾಂಗ್ರೆಸ್ ನಾಯಕರ ಪತ್ರದ ಹಿಂದೆ ಕೆಲಸ ಮಾಡಿರುವುದಾಗಿ ಹೇಳಲಾಗಿದೆ.ಸೀತಾರಾಮ ಕೇಸರಿ ಅವರನ್ನು ಶೌಚಾಲಯದಲ್ಲಿ ಇರಿಸಿ ಸೋನಿಯಾ ಅವರ ಆಯ್ಕೆ ಪ್ರಕಟಿಸಲಾಯಿತೆಂದು
ಆರೋಪಿಸಲಾಗಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲುಂಡ ಬಳಿಕ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾಗಿ ಅಕಾರ ವಹಿಸಿಕೊಂಡಿದ್ದರು. ಆದರೆ ಇದೀಗ ರಾಹುಲ್ ಗಾಂಧಿ ಮತ್ತೆ ಪಕ್ಷಾಧ್ಯಕ್ಷತೆ ವಹಿಸಿಕೊಳ್ಳಬೇಕೆಂಬ ಕೂಗು ಮತ್ತು ರಾಹುಲ್ ದಿನನಿತ್ಯವೆಂಬಂತೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಮಾಡುತ್ತಿರುವ ಆರೋಪಗಳು ರಾಹುಲ್ ಅವರನ್ನು ಆ ಸ್ಥಾನದಲ್ಲಿ ಕೂರಿಸಲು ನಡೆಯುತ್ತಿರುವ ಕಸರತ್ತಿನ ಭಾಗ ಎಂದು ವಿಶ್ಲೇಷಿಸಲಾಗಿದೆ. ಚೀನಾ ಆಕ್ರಮಣಕ್ಕೆ ಸಂಬಂಸಿ ರಾಹುಲ್ ಚೀನಾವನ್ನು ಖಂಡಿಸುವ ಬದಲಿಗೆ ಪ್ರಧಾನಿ ಮೋದಿ ಮತ್ತು ಭಾರತ ಸರಕಾರದ ವಿರುದ್ಧವೇ ನಿರಂತರ ವಾಗ್ದಾಳಿ ನಡೆಸುತ್ತಿರುವುದು ಇಲ್ಲಿ ಉಲ್ಲೇಖನೀಯ.
೫೦ ವರ್ಷ ಪ್ರಾಯದ ರಾಹುಲ್ ಗಾಂಧಿ ಬಹಿರಂಗದಲ್ಲಿ ಪಕ್ಷಾಧ್ಯಕ್ಷತೆ ವಹಿಸಿಕೊಳ್ಳಲು ಒಲ್ಲೆ ಎನ್ನುತ್ತಿದ್ದಾರೆ. ಸೋನಿಯಾ ಅವರು ಹಂಗಾಮಿ ಅಧ್ಯಕ್ಷರಾಗಿ ಆ.೧೦ಕ್ಕೆ ಒಂದು ವರ್ಷ ಪೂರೈಸಿದ್ದಾರೆ. ಆದರೀಗ ಪಕ್ಷದ ಅನೇಕ ಹಿರಿಯ ನಾಯಕರು,“ಹೊಸ ನಾಯಕನ ಆಯ್ಕೆ ತುಂಬ ವಿಳಂಬವಾಗದು “.ಈ ಕುರಿತ  “ಸೂಕ್ತ ಪ್ರಕ್ರಿಯೆ”ಗಳು ನಡೆಯುವವರೆಗೆ ನೀವೇ ಮುಂದುವರಿಯಬೇಕು ಎಂಬುದಾಗಿ ಸೋನಿಯಾ ಅವರನ್ನು ಕೋರಿದ್ದಾರೆ.
ಆದರೆ ಕಾಂಗ್ರೆಸ್ ನಾಯಕತ್ವ ಕುರಿತಂತೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ನಾಯಕರಲ್ಲಿ ಸಂಜಯ್ ಝಾ ಅವರು ಏಕಾಂಗಿಯೇನಲ್ಲ. ಈಗಾಗಲೇ ಶಶಿ ತರೂರು, ಸಂದೀಪ್ ದೀಕ್ಷಿತ್ (ದಿಲ್ಲಿ ಕಾಂಗ್ರೆಸ್ ನೇತಾರ)ಸೇರಿದಂತೆ ಹಲವು ನಾಯಕರು ಕೂಡಾ ಪಕ್ಷ ಹೊಸ ನಾಯಕನನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿರುವುದಕ್ಕಾಗಿ ಕಾಂಗ್ರೆಸ್ ನಾಯಕತ್ವವನ್ನು ತರಾಟೆಗೆತ್ತಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss