ಹೊಸ ದಿಗಂತ ವರದಿ, ಮಂಗಳೂರು:
ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಮೇಯರ್ ಕೃಷ್ಣಪ್ಪ ಮೆಂಡನ್ ಶುಕ್ರವಾರ ಮಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ ೮೮ ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಕಂಕನಾಡಿ ವಾರ್ಡ್ನ ಪಂಚಾಯತ್ ಸದಸ್ಯರಾಗಿ ತಮ್ಮ ಸಾಮಾಜಿಕ ಮತ್ತು ರಾಜಕೀಯ ಜೀವನವನ್ನು ಆರಂಭಿಸಿದ ಅವರು 1983ರಿಂದ ನಾಲ್ಕು ಸಲ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು.
1993ರಲ್ಲಿ ಕೃಷ್ಣಪ್ಪ ಮೆಂಡನ್ ಮಂಗಳೂರು ಮಹಾ ನಗರಪಾಲಿಕೆಯ ಮೇಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಗಾಣಿಗರ ಹಾಗೂ ಸಫಲಿಗರ ಸಂಘದ ಅಧ್ಯಕ್ಷರಾಗಿ ಹಾಗೂ ಕರಾವಳಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಕೃಷ್ಣಪ್ಪ ಮೆಂಡನ್ ಸೇವೆ ಸಲ್ಲಿಸಿದ್ದಾರೆ. ಅತ್ತಾವರದ ಶ್ರೀ ಉಮಾಮಹೇಶ್ವ ದೇವಸ್ಥಾನದ ಟ್ರಸ್ಟಿಯಾಗಿ ಮತ್ತು ಹಲವು ಸಂಘ ಸಂಸ್ಥೆಗಳಲ್ಲಿ ಕೃಷ್ಣಪ್ಪ ಮೆಂಡನ್ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.
ಕೃಷ್ಣಪ್ಪ ಮೆಂಡನ್ ಅವರ ನಿಧನಕ್ಕೆ ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ದನ ಪೂಜಾರಿ, ಎಂ.ವೀರಪ್ಪ ಮೊಲಿ, ಆಸ್ಕರ್ ಫೆರ್ನಾಂಡಿಸ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಶಾಸಕ ಯು.ಟಿ.ಖಾದರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್, ವಿಧಾನ ಪರಿಷತ್ತು ಮಾಜಿ ಸದಸ್ಯ ಐವನ್ ಡಿಸೋಜ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೊದಲಾದವರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ