Wednesday, August 10, 2022

Latest Posts

ಕಾಂಗ್ರೆಸ್ ಪಕ್ಷವು ನಾವಿಕನಿಲ್ಲದ ಹಡಗು: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಬಾಗಲಕೋಟೆ: ಕಾಂಗ್ರೆಸ್ ಪಕ್ಷವು ನಾವಿಕನಿಲ್ಲದ ಹಡಗು ಆಗಿದೆ, ಆ ಪಕ್ಷ ಈಗ ನಶಿಸಿ ಹೋಗುವ ಕಾಲ ಸನ್ನಿಹಿತವಾಗಿದೆ. ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನ ಮಾಡುವ ಶಕ್ತಿ ಈಗ ಯಾರಿಗೂ ಇಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಂದರ್ಭದಲ್ಲಿ ದೀನದಲಿತರು, ಹಿಂದುಳಿದವರು, ಅಸ್ಪ್ರಶ್ಯರನ್ನು ಮೇಲಕೆತ್ತುವ ಉದ್ದೇಶವನ್ನು ಇಟ್ಟುಕೊಂಡು ಮಹಾತ್ಮಾ ಗಾಂಧಿಜಿಯವರು ಕಟ್ಟಿದ ಕಾಂಗ್ರೆಸ್ ಒಂದು ಸಂಸ್ಥೆಯಾಗಿತ್ತು. ಅದನ್ನು ಈಗಿನ ಕಾಂಗ್ರೆಸ್ನವರು ದುರುಪಯೋಗ ಪಡಿಸಿಕೊಂಡು ರಾಜಕೀಯ ಪಕ್ಷವಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ಸ್ವಾತಂತ್ರ್ಯ ಸಿಗುವ ಮುನ್ನ ಬ್ರಿಟಿಷರನ್ನು ದೇಶದಿಂದ ಹೊರಗೆ ದಬ್ಬಲು ಎಲ್ಲ ಪಕ್ಷದವರು ಕಾಂಗ್ರೆಸ್ನಲ್ಲಿದ್ದರು. ಅದು ರಾಜಕೀಯ ಪಕ್ಷವಾಗಿರಲಿಲ್ಲ. ಈಗಿನ ಕಾಂಗ್ರೆಸ್ನವರು ನಾವೇ ಸ್ವಾತಂತ್ರ್ಯವನ್ನು ತಂದುಕೊಟ್ಟವರು ಎಂದು ಕಾಂಗ್ರೆಸ್ನ್ನು ರಾಜಕೀಯ ಪಕ್ಷವಾಗಿ ಮಾರ್ಪಡಿಸಿಕೊಂಡ ಪರಿಣಾಮ 60 ವರ್ಷ ಆಡಳಿತ ನಡೆಸಿದರು. ಆಗಿನ ಕಾಂಗ್ರೆಸ್ನವರಿಗೆ ಸಾಮಾಜಿಕ ಕಳಕಳಿ ಇತ್ತು ಆದರೆ ಇವತ್ತಿನ ನಾಯಕರಿಗೆ ಅದೆಲ್ಲ ಇಲ್ಲದಂತಾಗಿದೆ ಎಂದು ಹೇಳಿದರು.
ಕಾಂಗ್ರೆಸ್ನವರು ಸ್ವಾರ್ಥಕ್ಕಾಗಿ ಏನು ಬೇಕು ಅದನ್ನೆಲ್ಲಾ ಮಾಡಿಕೊಂಡಿದ್ದಾರೆ. ಆದರೆ ಯಾರಲ್ಲಿ ಸ್ವಾರ್ಥತನ ಇರುತ್ತದೆ ಅವರಿಗೆ ಭಯ ಕಾಡುತ್ತದೆ.  ತತ್ವ ಸಿದ್ಧಾಂತದ ಮೇಲೆ ರಾಜಕೀಯ ಮಾಡುವವರಿಗೆ ಭಯ ಕಾಡುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವುಕುಮಾರ ಅವರು ಸದಾ ಸುದ್ದಿಯಲ್ಲಿ ಇರಬೇಕೆಂದು ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ಡಿಕೆಶಿ ಹೇಳಿಕೆ ಒಂದು ತರಹ ನೀರ ಕೆಟ್ಟ ಸುದ್ದಿಯಂತೆ ಎಂದು ಲೇವಡಿ ಮಾಡಿದರು.
ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss