ಶಿವಮೊಗ್ಗ: ಸ್ವಾತಂತ್ರ್ಯಪೂರ್ವದಿಂದ ಕಾಂಗ್ರೆಸ್ ಪಕ್ಷ ಇದೆ ಎಂಬುದನ್ನು ಹೊರತುಪಡಿಸಿದರೆ ಆ ಪಕ್ಷಕ್ಕೆ ಸಮರ್ಥ ನಾಯಕತ್ವವೇ ಇಲ್ಲ ಎಂಬುದು ಈಗ ಗೊತ್ತಾಗುತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಒಡೆದ ಕನ್ನಡಿಯಂತಾಗಿದೆ. ಮತ್ತೆ ಸೇರಿಸಲು ಸಾಧ್ಯವೇ ಇಲ್ಲದ ಸ್ಥಿತಿಗೆ ಬಂದಿದೆ. ಕಾಂಗ್ರೆಸ್ ಪಕ್ಷದ 23ಕ್ಕೂ ಹೆಚ್ಚು ರಾಷ್ಟ್ರೀಯ ನಾಯಕರು ಆ ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ. ಆ ಪಕ್ಷದ ರಾಜಕೀಯ ಇತಿಹಾಸದಲ್ಲಿ ಈ ರೀತಿ ಆಗಿರಲಿಲ್ಲ ಎಂದರು.
ಡಿ.ಕೆ.ಶಿವಕುಮಾರ್ ಫೋನ್ಟ್ಯಾಪ್ ಮಾಡಿ ದೇಶ ಏನು ಉದ್ಧಾರ ಆಗುತ್ತೆ ನಂಗೆ ಗೊತ್ತಿಲ್ಲ. ಫೋನ್ಟ್ಯಾಪಿಂಗ್ ಆರೋಪ ಪ್ರಚಾರದ ತಂತ್ರವೇ ಹೊರತು ಮತ್ತೇನೂಅಲ್ಲ. ಅರ್ಥವಿಲ್ಲದೇ ಆರೋಪ ಮಾಡುತ್ತಾರೆ ಎಂದ ಅವರು,ಮುಂದಿನ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗುತ್ತಾರೆ ಎಂಬ ಮುರುಗೇಶ್ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಪೊಲೀಸ್ ಅಧಿಕಾರಿಯಾಗಿ ಜನಮೆಚ್ಚುಗೆ ಗಳಿಸಿದ ಅಣ್ಣಾಮಲೈ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಅಣ್ಣಾಮಲೈ ಅವರಂತಹ ಅಧಿಕಾರಿಗಳು ಬಿಜೆಪಿ ಸೇರುತ್ತಿರುವುದು ಸ್ವಾಗತಾರ್ಹ ಎಂದರು .