Wednesday, August 10, 2022

Latest Posts

ಕಾಂಗ್ರೆಸ್ ಬಸ್ಸಿನ ನಾಲ್ಕು ಚಕ್ರಗಳು ಪಂಕ್ಚರ್ : ಬಸವರಾಜ ಬೊಮ್ಮಾಯಿ ಲೇವಡಿ

ಹೊಸ ದಿಗಂತ ವರದಿ, ಹಾವೇರಿ:

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ ಒಂದು ಕಡೆ ಕಂಡಕ್ಟರ್, ಇನ್ನೊಂದೆಡೆ ಸಿದ್ದರಾಮಯ್ಯ ಡ್ರೈವರ್. ಡಿಕೆಶಿ ಎಲ್ಲಿ ಸ್ಟಾಪ್ ಅಂತಾರೆ ಅಲ್ಲಿ ಸಿದ್ದರಾಮಯ್ಯ ಗಾಡಿ ಹೊಡಿತಾರೆ. ಡಿಕೆಶಿ ಎಲ್ಲಿ ಗಾಡಿ ಹೊಡಿ ಅಂತಾರೆ ಅಲ್ಲಿ ಸಿದ್ದರಾಮಯ್ಯ ಸ್ಟಾಪ್ ಮಾಡ್ತಾರೆ ಎನ್ನುವ ಮೂಲಕ ರಾಜ್ಯ ಕಾಂಗ್ರೆಸ್ಸಿನ ಸ್ಥಿತಿಯನ್ನು ಮಾರ್ಮಿಕವಾಗಿ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದರು.
ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಜರುಗಿದ ಜನಸೇವಕ ಸಮಾವೇಶದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಎನ್ನುವ ಬಸ್ ಹಿಂದೂ ಹೋಗಲ್ಲ, ಮುಂದೂ ಹೋಗಲ್ಲ. ನಿಂತಲ್ಲೇ ನಿಲ್ಲೋ ಬಸ್. ಕಾಂಗ್ರೆಸ್ ಬಸ್ಸಿನ ನಾಲ್ಕು ಚಕ್ರಗಳು ನಿಂತು ನಿಂತು ಪಂಕ್ಚರ್ ಆಗಿವೆ ಎಂದರು.

ಸಿದ್ದರಾಮಯ್ಯ ಸರಕಾರದ ಯಾವ ಭಾಗ್ಯಗಳು ಜನರನ್ನ ತಲುಪಿಲ್ಲ
ಕಾಂಗ್ರೆಸ್‌ನವರ ಮನೆ ದೇವರ ಹೆಸರು ಸುಳ್ಳು. ಸಿದ್ದರಾಮಯ್ಯ ಸರಕಾರದ ಯಾವ ಭಾಗ್ಯಗಳು ಜನರನ್ನ ತಲುಪಲಿಲ್ಲ. ಆ ಸರಕಾರವೆ ದೌರ್ಭಾಗ್ಯ ಆಗಿ ಹೋಯ್ತು. ಕಾಂಗ್ರೆಸ್ ಪಕ್ಷ ಮುಳುಗ್ತಿರೋ ಹಡುಗು. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಶ್ರೀಮಂತರ ಪರ, ವಿರೋಧ ಪಕ್ಷದಲ್ಲಿದ್ದಾಗ ಬಡವರ ಪರ ಮಾತಾಡ್ತಾರೆ. ರಾಜ್ಯದಲ್ಲಿ 2018ರಲ್ಲಿ ಅಂಬಾನಿ ಮತ್ತು ಅದಾನಿ ಕಂಪನಿಗೆ ರಿನ್ಯುವಲ್ ಲೈಸನ್ಸ್ ಕೊಟ್ಟಿದ್ದು ಸಿದ್ದರಾಮಯ್ಯ. ರೈತರನ್ನ ದಾರಿ ತಪ್ಪಿಸೋ ಕೆಲಸವನ್ನ ಮಾಡಬೇಡಿ ಎಂದು ಹರಿಹಾಯ್ದರು.
ಬರುವ ಬಜೆಟ್ ರೈತಪರ ಬಜೆಟ್ ಆಗುತ್ತದೆ. ಯಡಿಯೂರಪ್ಪನವರು ತಮ್ಮ ಆಯುಷ್ಯವನ್ನ ರೈತರಿಗಾಗಿ ಹೋರಾಟ ಮಾಡಿದ್ದಾರೆ. ಯಡಿಯೂರಪ್ಪ ರೈತರಿಗೆ ಮಾರಕ ಆಗುವಂತಹ ಕೆಲಸ ಮಾಡೋದಿಲ್ಲ. ಬಾಜು ಮನೆಯಲ್ಲಿ ಗಂಡು ಹುಟ್ಟಿದರೆ ಕಾಂಗ್ರೆಸ್ ನವರು ಪೇಡಾ ಕೊಡ್ತಾರೆ. ನಮ್ಮದು ಹಾಗಲ್ಲ. ನಮ್ಮ ಮನೆಯಲ್ಲಿ ಗಂಡು ಹುಟ್ಟಿದರೆ ನಾವು ಪೇಡೆ ಕೊಡ್ತೇವೆ ಎನ್ನುವ ಮೂಲಕ ಕಾಂಗ್ರೆಸ್ಸಿನ ರೈತ ವಿರೋಧ ಬೀತಿಯನ್ನು ಖಂಡಿಸಿದರು.

ನಾವೆಲ್ಲ ಸೇರಿ ರಾಮ ಮಂದಿರ ನಿರ್ಮಾಣ ಮಾಡೋಣ
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಮ ಮಂದಿರ ನಮ್ಮ ಕನಸು. ಈ ದೇಶದ ಮನೆ ಮನೆಯಲ್ಲಿ ರಾಮನಿದ್ದಾನೆ. ಟಾಟಾ, ಬಿರ್ಲಾ ಸೇರಿದಂತೆ ಅನೇಕರು ರಾಮ ಮಂದಿರ ನಿರ್ಮಿಸಿಕೊಡಲು ಮುಂದೆ ಬಂದಿದ್ದಾರೆ. ಟಾಟಾ, ಬಿರ್ಲಾರಿಂದ ರಾಮ ಮಂದಿರ ನಿರ್ಮಾಣ ಬೇಡ. ರಾಮ ಮಂದಿರವನ್ನ ನಾವೆ ನಿರ್ಮಾಣ ಮಾಡಬೇಕು ಅದು ನಮ್ಮ ಸಂಕಲ್ಪ. ಇದೇ ಜ.15ರಿಂದ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡೋಣ. ನಾವೆಲ್ಲ ಸೇರಿ ರಾಮ ಮಂದಿರ ನಿರ್ಮಾಣ ಮಾಡೋಣ ಎಂದರು.

ಯಡಿಯೂರಪ್ಪರಿಂದ ಮೀಸಲಾತಿ ಹೆಚ್ಚಳ ಮಾಡಿಕೊಡೋ ಕೆಲಸ ಮಾಡುತ್ತೇವೆ
ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡೋಕೆ ಯಾರಿಂದಲೂ ಆಗಿಲ್ಲ. ಎಸ್ಟಿ ಮೀಸಲಾತಿ ಶೇ.3 ರಿಂದ 7.5 ಮತ್ತು ಎಸ್ಸಿ ಮೀಸಲಾತಿ ಶೇ.15 ರಿಂದ 17 ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪರಿಂದ ಮೀಸಲಾತಿ ಹೆಚ್ಚಳ ಮಾಡಿಕೊಡೋ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ, ಬಿ.ಶ್ರೀರಾಮುಲು, ಸಂಸದರಾದ ಶೋಭಾ ಕರಂದ್ಲಾಜೆ, ಶಿವಕುಮಾರ ಉದಾಸಿ, ಶಾಸಕ ನೆಹರು ಓಲೇಕಾರ, ವಿಧಾನಪರಿಷತ್ ಸದಸ್ಯರಾದ ಆರ್.ಶಂಕರ, ಪ್ರದೀಪ ಶೆಟ್ಟರ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ನವೀನ.ಕೆ.ಎಸ್., ಮಂಜುನಾಥ ಕುನ್ನೂರ, ಪಾಲಾಕ್ಷಗೌಡ ಪಾಟೀಲ ಹಾಗೂ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss