Tuesday, July 5, 2022

Latest Posts

ಕಾಗಿಣಾ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ ಅನುಮೋದನೆ

ಹೊಸದಿಗಂತ ವರದಿ, ಕಲಬುರಗಿ:

ಜಿಲ್ಲೆಯ ಸೇಡಂ ತಾಲೂಕಿನ ಕಾಗಿಣಾ ನದಿಯಿಂದ ಏತ ನೀರಾವರಿ ಮುಖಾಂತರ ನೀರನ್ನೆತ್ತಿ, ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ 639.30 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ದೊರೆತಿದೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್ ತಿಳಿಸಿದರು.
ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 639.30 ಕೋಟಿ ರೂಪಾಯಿಗಳ ಈ ಯೋಜನೆಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕೆ.ಎನ್.ಎನ್.ಎಲ್)ದ 93ನೇ ನಿರ್ದೇಶಕರ ಮಂಡಳಿ ಸಭೆ ಅನುಮೋದನೆ ನೀಡಿದ್ದು, ಯೋಜನೆಯ ಡಿ.ಪಿ.ಆರ್.ರೆಡಿಯಾಗಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.
ಕಾಗಿಣಾ ನದಿಗೆ ಹಂಚಿಕೆಯಾಗಿರುವ 2 ಟಿಎಂಸಿ ನೀರು ಬಳಕೆಗೆ ಕಾಗಿಣಾ ಏತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಜಲ ಸಂಪನ್ಮೂಲ ಸಚಿವರಿಗೆ ಕಳೆದ ಒಂದು ವರ್ಷದಿಂದ ಒತ್ತಾಯಿಸುತ್ತ ಬರಲಾಗಿತ್ತು. ಕಲ್ಯಾಣ ಕರ್ನಾಟಕ ಉತ್ಸಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಮಾಡಲಾಗಿತ್ತು. ಇದೀಗ ಯೋಜನೆ ಅನುಮೋದನೆ ದೊರೆತಿದ್ದು, ಈ ವರ್ಷ ಯಡ್ಡಳ್ಳಿ ಹತ್ತಿರ 59.80 ಕೋಟಿ ಮತ್ತು ತರನಳ್ಳಿ ಹತ್ತಿರ 84 ಕೋಟಿ ರೂಪಾಯಿ ಸೇರಿ 143.80 ಕೋಟಿ ರೂಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗುವು ಎಂದರು.
ಈ ಯೋಜನೆ ಜಾರಿಯಿಂದ ಸೇಡಂ ವಿಧಾನಸಭಾ ಕ್ಷೇತ್ರದ 47 ಗ್ರಾಮಗಳ 25 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಮೂರು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಜರ್ಮನ್ ತಂತ್ರಜ್ಞಾನ ಬಳಸಿಕೊಂಡು ಕೆನಾಲ್ ಮೂಲಕ ದೊಡ್ಡ ಪೈಪ್ ಲೈನ ಮುಖಾಂತರ ರೈತರ ಜಮೀನುಗಳಿಗೆ ನೀರು ಹರಿಸಲಾಗುವುದು. ಇನ್ನೆರಡು ತಿಂಗಳಲ್ಲಿ ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಕಮಲಾವತಿ ನದಿ ಪುನರುಜ್ಜೀವನ
ಸೇಡಂ ತಾಲ್ಲೂಕಿನಲ್ಲಿ ಹರಿಯುತ್ತಿರುವ ಕಮಲಾವತಿ ನದಿಗೆ ಮೂರು ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವ 25 ಕೋಟಿ ರೂಪಾಯಿ ಯೋಜನೆಗೂ ಅನುಮೋದನೆ ದೊರೆತಿದೆ. ಇದ-ರಿಂದಾಗಿ ಕಮಲಾವತಿ ನದಿಯ ಪುನರುಜ್ಜೀವನವಾಗಲಿದೆ. ಕಮಲಾವತಿ ನದಿಯ ಪುನರುಜ್ಜೀವನಕ್ಕಾಗಿ 203 ಕೋಟಿ ರೂಪಾಯಿ ಮೀಸಲಿರಿಸಿದ್ದು, ಈ ವರ್ಷ ಮೂರು ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ಬಿಡುಗಡೆ ಮಾಡಲು ಕರ್ನಾಟಕ ನೀರಾವರಿ ನಿಗಮ ನಿಯಮತದ 93ನೇ ನಿರ್ದೇಶಕರ ಮಂಡಳಿ ಸಭೆ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ, ಕಾಡಾ ಅಧ್ಯಕ್ಷ ಶರಣಪ್ಪಾ ತಳವಾರ, ಚಂದ್ರಶೇಖರ ತಳ್ಳಳ್ಳಿ ಸೇರಿದಂತೆ ಹಲವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss