ಹೊಸ ದಿಗಂತ ವರದಿ, ಸೋಮವಾರಪೇಟೆ:
ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳವ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು ಇಬ್ಬರು ಅಸ್ಸಾಂ ಮೂಲದ ಕಾರ್ಮಿಕರು ಹಾಗೂ ಮಗು ಗಾಯಗೊಂಡಿರುವ ಘಟನೆ ಭಾನುವಾರ ಕೂಗೂರು ಗ್ರಾಮದಲ್ಲಿ ನಡೆದಿದೆ.
ಮೋಹನ್ ಎಂಬವರ ಕಾಫಿ ತೋಟದಲ್ಲಿ ಹಣ್ಣು ಕೊಯ್ಲು ಮಾಡುತ್ತಿದ್ದ ಸಂದರ್ಭ ಹಠಾತ್ತನೆ ಕಾಡಾನೆ ಅಟ್ಟಿಸಿಕೊಂಡು ಹೋಗಿದೆ. ಓಡುವ ಸಂದರ್ಭದಲ್ಲಿ ಸುಕೂರ್ ಮತ್ತು ಒಮೇಜ್ ಬಿದ್ದು ಗಾಯಗೊಂಡಿದ್ದಾರೆ. ಮಗುವನ್ನು ಎತ್ತಿಕೊಂಡು ಓಡುತ್ತಿದ್ದ ತಾಯಿ ಬಿದ್ದಾಗ ಮಗು ರುಕ್ಮಿಯಾಳ ಬಲಗೈ ಮೂಳೆ ಮುರಿದಿದೆ. ಕಾರ್ಮಿಕರು ಬೊಬ್ಬೆ ಹೊಡೆದಾಗ ಕಾಡಾನೆ ಅರಣ್ಯಕ್ಕೆ ತೆರಳಿದೆ.
ಸ್ಥಳಕ್ಕೆ ಶನಿವಾರಸಂತೆ ಆರ್.ಎಫ್.ಓ. ಪ್ರಫುಲ್ ಕುಮಾರ್ ಶೆಟ್ಟಿ ಮತ್ತು ಠಾಣಾಧಿಕಾರಿ ದೇವರಾಜ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಅರಣ್ಯ ಇಲಾಖೆಯ ವತಿಯಿಂದ ಗಾಯಾಳುಗಳಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಕಾಡಾನೆ ಹಾವಳಿಯಿಂದ ಫಸಲು ಹಾನಿಯಾಗುತ್ತಿದೆ. ಭತ್ತ ಪೈರನ್ನು ತುಳಿದು ನಾಶ ಮಾಡುತ್ತಿವೆ. ಕಾಡಾನೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಕೂಗೂರು ಗ್ರಾಮದ ಕೃಷಿಕ ಸುಮಂತ್ ಆರೋಪಿಸಿದರು.
ಅರಣ್ಯ ಇಲಾಖೆಯ ಕೆಲ ಸಿಬ್ಬಂದಿಗಳು ಕೃಷಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರ್.ಎಫ್.ಒ ಅವರೊಂದಿಗೆ ಗ್ರಾಮದ ಪ್ರಮುಖರು ದೂರಿದರು.