ಹೊಸ ದಿಗಂತ ವರದಿ, ಕುಶಾಲನಗರ:
ಕಾಡಾನೆಗಳ ಹಾವಳಿ ತಡೆಗಟ್ಟುವಂತೆ ಅರಣ್ಯ ಇಲಾಖೆಗೆ ಮಾಡಿಕೊಂಡ ಮನವಿಗಳಿಗೆ ಯಾವುದೇ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ಇದೀಗ ತಮ್ಮ ಬೆಳೆಗಳ ರಕ್ಷಣೆಗೆ ರೈತರೇ ಮುಂದಾಗಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು, ಕಾಳಿದೇವನ ಹೊಸೂರು, ಮಾವಿನಹಳ್ಳ, ಮದಲಾಪುರ ಗ್ರಾಮಗಳಲ್ಲಿ ಕಳೆದ ಮೂರು ತಿಂಗಳುಗಳಿಂದ ನಿರಂತರವಾಗಿ ಕಾಡಾನೆಗಳು ರೈತರ ಜಮೀನುಗಳಿಗೆ ದಾಳಿ ಮಾಡುವುದರೊಂದಿಗೆ ರೈತರು ಬೆಳೆದ ಭತ್ತ, ಜೋಳೆ, ಕೆಸ, ಕೇನೆ ಸೇರಿದಂತೆ ವಿವಿಧ ಫಸಲುಗಳನ್ನು ತಿಂದು-ತುಳಿದು ಹಾಳು ಮಾಡಿವೆ.
ಅದರಲ್ಲೂ ಭತ್ತದ ನಾಟಿ ಮಾಡಿದ ರೈತರ ಪಾಡಂತೂ ಹೇಳತೀರದ್ದಾಗಿದ್ದು, ನಾಟಿ ಆರಂಭವಾದಂದಿನಿಂದ ಇಂದಿನವರೆಗೂ ಕಾಡಾನೆಗಳ ಹಾವಳಿ ನಿಂತಿಲ್ಲ. ಆನೆಕಾಡಿನ ಅಂಚಿನಿಂದ ಬೆಂಡೆಬೆಟ್ಟ ಮಾರ್ಗವಾಗಿ ಹಾರಂಗಿ ನದಿ ದಾಡಿ ಬರುವ ಕಾಡಾನೆಗಳ ಹಿಂಡು ಈ ಗ್ರಾಮಗಳ ನೂರಾಗು ಎಕರೆ ಭತ್ತ ಹಾಗೂ ಇತರ ಬೆಳೆಗಳನ್ನು ಹಾನಿಗೊಳಿಸಿ ಲಕ್ಷಾಂತರ ರೂ. ನಷ್ಟ ಉಂಟು ಮಾಡಿವೆ.
ಕಾಡಾನೆ ಹಾವಳಿ ತಡೆಯುವಂತೆ ಅರಣ್ಯ ಇಲಾಖೆಗೆ ಮಾಡಿಕೊಂಡ ಮನವಿಗಳಿಗೆ ಯಾವುದೇ ಸ್ಪಂದನ ದೊರಕದೆ ರೈತರು ಕಂಗಾಲಾಗಿದ್ದು, ಇದೀಗ ಅಳಿದುಳಿದ ಫಸಲನ್ನು ರಕ್ಷಿಸಿಕೊಳ್ಳಲು ಆ ಭಾಗದ ರೈತರು ತಾವೇ ಮುಂದಾಗಿದ್ದಾರೆ.
ಸೋಲಾರ್ ಬೇಲಿ ಲೆಕ್ಕಕ್ಕಿಲ್ಲ: ಈ ವ್ಯಾಪ್ತಿಯ ಐದು ಗ್ರಾಮದವರು ಹಾರಂಗಿ ನದಿ ಅಂಚಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಎರಡು ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ವಿದ್ಯುತ್ ತಂತಿಯನ್ನು ಅಳವಡಿಸಿದ್ದರೂ, ಹಾರಂಗಿ ನದಿ ದಾಟಿಕೊಂಡು ಬರುವ 10ಕ್ಕೂ ಹೆಚ್ಚು ಕಾಡಾನೆಗಳು ಸೋಲಾರ್ ವಿದ್ಯುತ್ ಬೇಲಿಯನ್ನು ಸಂಪೂರ್ಣವಾಗಿ ಹಾಳುಗೆಡವಿ ನೇರವಾಗಿ ಭತ್ತದ ಗದ್ದೆಗಳಿಗೆ ನುಗ್ಗುತ್ತಿವೆ. ಇದರಿಂದ ಕಂಗಾಲಾಗಿರುವ ರೈತರು ತಮ್ಮ ಜಮೀನಿನ ಬಳಿಯ ಮರದ ಮೇಲೆ ಅಟ್ಟಣಿಗೆಗಳನ್ನು ನಿರ್ಮಿಸಿ ಕಾವಲು ಕಾಯತೊಡಗಿದ್ದಾರೆ.
ಈ ಹಿಂದೆ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಜೋಳ ಬೆಳೆಯುವ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಅಟ್ಟಣಿಗೆಗಳು ಇದೀಗ ಭತ್ತ ಬೆಳೆಯುವ ಪ್ರದೇಶಗಳಲ್ಲೂ ಗೋಚರಿಸುತ್ತಿದ್ದು, ರಾತ್ರಿ ವೇಳೆ ಭತ್ತದ ಫಸಲಿಗೆ ಬರುವ ಕಾಡಾನೆಗಳನ್ನು ನಿಯಂತ್ರಿಸಲು ರೈತರೇ ಮುಂದಾಗಿದ್ದಾರೆ. ಹುದುಗೂರು, ಕಾಳಿದೇವನಹೊಸೂರು, ಮದಲಾಪುರ, ಮಾವಿನಹಳ್ಳ, ಸೀತೆಗದ್ದೆ ವ್ಯಾಪ್ತಿಯಲ್ಲಿ ಆಯಾ ಭಾಗದ ರೈತರು ಅಟ್ಟಣಿಗೆಗಳನ್ನು ನಿರ್ಮಿಸಿಕೊಂಡು ರಾತ್ರಿಯ ವೇಳೆಯಲ್ಲಿ ಕಾವಲು ಕಾಯುತ್ತಿದ್ದಾರೆ.
ಹೆಸರಿಗೆ ಮಾತ್ರ ಅರಣ್ಯ ಇಲಾಖೆಸಿಬ್ಬಂದಿ ವರ್ಗದವರು ಬರುತ್ತಾರೆ- ಹೋಗುತ್ತಾರೆ ಅದರೆ ಕಾಡಾನೆಗಳು ಅವರ ಕಣ್ಣು ತಪ್ಪಿಸಿ ರೈತ ಬೆಳೆಯನ್ನು ದಿನಂಪ್ರತಿ ಹಾಳುಮಾಡುತ್ತಿವೆ ಎಂದು ಈ ಭಾಗದ ನೂರಾರು ರೈತರು ಅಳಲು ತೋಡಿಕೊಂಡಿದ್ದಾರೆ.
ಮದಲಾಪುರದ ಜಗದೀಶ್, ಮಂಜುನಾಥ, ಹುದುಗೂರು ಗ್ರಾಮದ ಕೃಷ್ಣೇಗೌಡ, ಧನಂಜಯ, ರಘು, ಪುಟ್ಟರಾಜು, ತಿಮ್ಮಯ್ಯ, ರಮೇಶ್, ಹೆಚ್. ಕೆ.ರಾಮು, ರುದ್ರಪ್ಪ, ಲಕ್ಮಿಕಾಂತ್ ಸೇರಿದಂತೆ ಅನೇಕ ರೈತರು ಮರದ ಮೇಲೆ ಅಟ್ಟಣಿಗೆಗಳನ್ನು ಅಳವಡಿಸಿಕೊಂಡು ಕಾಡಾನೆಗಳಿಂದ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.