Wednesday, August 17, 2022

Latest Posts

ಕಾಡಾನೆ ಹಾವಳಿ: ಸುಂಟಿಕೊಪ್ಪ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆದ ರೈತರ ಬೆಳೆ ನಾಶ

ಸುಂಟಿಕೊಪ್ಪ: ರೊಚ್ಚಿಗೆದ್ದ ಕಾಡಾನೆಗಳು ರೈತರು ಬೆಳೆದ ಶುಂಠಿ, ಬಾಳೆ, ಕೇನೆ, ಕಾಫಿ ತೋಟಗಳಿಗೆ ಲಗ್ಗೆಯಿಟ್ಟು ಸಂಪೂರ್ಣ ಧ್ವಂಸಗೊಳಿಸಿದ್ದು, ಕೃಷಿಕರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ನಾಕೂರು ಶಿರಂಗಾಲ, ಅಂದಗೋವೆ, ಕಲ್ಲೂರು, ಹೆರೂರು, ಕಾನ್‌ಬೈಲ್, ಮಂಜಿಕೆರೆ ಭಾಗಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯಿಂದ ಕೈಗೊಳ್ಳಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಪಟಾಕಿ ಸಿಡಿಸಿ ಕಾಡಾನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನಿಸಿದರು.

ಆದರೆ ಕಾಡಾನೆಗಳು ಕಾಡಿಗೆ ಅಟ್ಟಲಾಯಿತ್ತೊ ಇಲ್ಲವೋ, ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಸೇಡು ತೀರಿಸಿಕೊಳ್ಳಲೆಂಬಂತೆ ರಾತ್ರಿ ವೇಳೆ ಕಾಡಾನೆಗಳು ನಾಕೂರು, ಹೆರೂರು, ಅಂದಗೋವೆ, ಕಲ್ಲೂರು, ನಾಕೂರು ಶಿರಂಗಾಲ ವ್ಯಾಪ್ತಿಯ ತೋಟಗಳಿಗೆ ಲಗ್ಗೆಯಿಟ್ಟು ಬೆಳೆದು ನಿಂತ ಶುಂಠಿ, ಕೇನೆ, ನಾಟಿ ಮಾಡಿದ ಗದ್ದೆ ಕಾಫಿ ತೋಟದ ಕಾಫಿಗಳನ್ನು ತಿಂದು ತುಳಿದು ಕಿತ್ತು ಹಾಕಿ ನಾಶ ಪಡಿಸಿವೆ.

ಈಗಾಗಲೇ ಕೊರೋನಾ ಭೀತಿ ಹಾಗೂ ಅತಿವೃಷ್ಟಿಯಿಂದ ಕಂಗಾಲಾದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ನಾಟಿ ಮಾಡಿದ ಗದ್ದೆಯೂ ಇಲ್ಲ, ಬೆಳೆದು ನಿಂತ ಕೃಷಿಯೂ ಇಲ್ಲ ಎಂಬಂತಾಗಿದ್ದು, ಮುಂದಿನ ವರ್ಷ ಯಾವ ರೀತಿಯಿಂದ ಜೀವನ ಸಾಗಿಸುವುದೆಂಬ ಚಿಂತೆಯಲ್ಲಿ ಕೃಷಿಕರಿದ್ದಾರೆ.

ಮನೆಯ ಅಂಗಳದಲ್ಲೇ ಆನೆಗಳ ಹಿಂಡು: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋಟಂಡ ಎ.ಕುಟ್ಟಪ್ಪ ಅವರ ಮನೆಯ ಅಂಗಳಕ್ಕೆ ಮರಿಯೊಂದಿಗೆ ಆಗಮಿಸಿದ ಕಾಡಾನೆಗಳ ಹಿಂಡು ಘೀಳಿಡುತ್ತಾ ಮನೆ ಮಂದಿಗೆ ಜೀವ ಭಯ ಸೃಷ್ಟಿಸಿದ ಘಟನೆಯೂ ನಡೆದಿದೆ.

ಮಧ್ಯರಾತ್ರಿ ವೇಳೆ ಕಾಡಾನೆಗಳ ಹಿಂಡು ಮನೆಯಂಗಳಕ್ಕೆ ದಾಳಿ ಮಾಡಿ ಸಮೀಪದಲ್ಲೇ ಇದ್ದ ತೆಂಗಿನ ಗಿಡವನ್ನು ತಿಂದು ನಾಶ ಪಡಿಸಿದೆ. ಮನೆಯ ಸಮೀಪಕ್ಕೆ ಆಗಮಿಸಿದ ಕಾಡಾನೆಗಳ ಹಿಂಡು ಪುಂಡಾಟಿಕೆ ತೋರಿದ್ದು, ಮನೆಯ ಮಾಲಕನ ಧೂಮಪಾನದ ಹೊಗೆಯ ವಾಸನೆ ಹರಡುತ್ತಿದ್ದಂತೆ ಕಾಡಾನೆಗಳು ಅಲ್ಲಿಂದ ಕಾಲ್ಕಿತ್ತಿವೆ. ತೋಟದ ಕಾಫಿ ಗಿಡಗಳನ್ನು ದ್ವಂಸ ಮಾಡಿ, ನಾಟಿ ಮಾಡಿದ ಗದ್ದೆಗೆ ತೆರಳಿ ತುಳಿದು ನಾಶಪಡಿಸಿದೆ.

ಚಿಮ್ಮಂಡ ಗಣಪತಿ ಎಂಬವರ ಗದ್ದೆಗೆ ತೆರಳಿ ಸಂಪೂರ್ಣ ನಾಶಪಡಿಸಿದ್ದು ಅಂದಾಜು 50 ಸಾವಿರ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!