spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, September 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಡಾನೆ-ಹುಲಿಗಳ ನಡುವೆ ಇನ್ನು ಬದುಕಲು ಸಾಧ್ಯವಿಲ್ಲ : ಜಿ.ಪಂ. ಸದಸ್ಯರ ಅಳಲು

- Advertisement -Nitte

ಮಡಿಕೇರಿ : ಕೊಡಗಿನ ಜನತೆ ಹಲವು ವರ್ಷಗಳಿಂದ ಕಾಡಾನೆ, ಹುಲಿಗಳ ನಡುವೆಯೇ ಬದುಕುತ್ತಿದ್ದು, ಇನ್ನು ಮುಂದೆ ಬದುಕಲು ಅಸಾಧ್ಯ. ಆದ್ದರಿಂದ ಕಾಡಾನೆ ಹಾವಳಿ, ಹುಲಿ ದಾಳಿಯನ್ನು ನಿಯಂತ್ರಿಸಬೇಕಿದೆ ಎಂಬ ಆಗ್ರಹ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಕೇಳಿ ಬಂದಿತು.
ಕಳೆದ ಹಲವು ವರ್ಷಗಳಿಂದ ಕಾಡಾನೆ ಹಾಗೂ ಹುಲಿಗಳ ನಡುವೆ ಬದುಕಿದ್ದೇವೆ. ಇನ್ನು ಮುಂದೆ ಬದುಕಲು ಅಸಾಧ್ಯ ಎಂದು ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಬೇಸರ ವ್ಯಕ್ತಪಡಿಸಿದರು.
ಅಪ್ಪಚಂಡ ಮಹೇಶ್ ಅವರು ಮಾತನಾಡಿ ತೋರ, ಹೆಗ್ಗಳ ಮತ್ತಿತರ ಭಾಗದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಆದ್ದರಿಂದ ಆನೆ ಕಂದಕ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಪರಿಹಾರ ನೀಡುವವರು ಯಾರು ?: ಮಧ್ಯಪ್ರವೇಶಿಸಿ ಮಾತನಾಡಿದ ಸುನಿತಾ ಅವರು, ನೆಲ್ಯಹುದಿಕೇರಿ ಭಾಗದಲ್ಲಿ ಕಾಡಾನೆಗಳನ್ನು ಓಡಿಸಲಾಗುತ್ತದೆ. ಇದರಿಂದ ಸಾಕಷ್ಟು ಬೆಳೆ ಹಾನಿ ಉಂಟಾಗಲಿದೆ. ಬೆಳೆ ಹಾನಿ ಪರಿಹಾರ ಕೊಡುವವರು ಯಾರು ಎಂದು ಪ್ರಶ್ನಿಸಿದರು.
ಲತೀಫ್ ಅವರು ಮಾತನಾಡಿ, ಕಾಡಾನೆಗಳನ್ನು ಓಡಿಸಬೇಕು. ಜೊತೆಗೆ ಕಾಫಿ ಗಿಡ ನಷ್ಟವಾದಲ್ಲಿ ಕಾಫಿ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಸಂಪರ್ಕ ವಿಳಂಬ : ಕುಡಿಯುವ ನೀರು ಪೂರೈಕೆ ಸಂಬಂಧದ ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಹಣ ಪಾವತಿಸಲು ವಿಳಂಬವಾಗುತ್ತಿದೆ. ವಿದ್ಯುತ್ ಇಲಾಖೆಗೆ ಹಣ ಪಾವತಿಗೆ ಬಾಕಿ ಇದ್ದಲ್ಲಿ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು ಎಂದು ಜಿ.ಪಂ. ಅಧ್ಯಕ್ಷರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಸಂಬಂಧಪಟ್ಟ ಇಲಾಖೆ ಆಯುಕ್ತರಿಗೆ ಪತ್ರ ಬರೆಯುವಂತೆ ಎಂಜಿನಿಯರಿಗೆ ಸೂಚಿಸಿದರು.
3300 ಕುಟುಂಬಗಳಿಗೆ ವಿದ್ಯುತ್ : ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದ್ದ 4,334 ಕುಟುಂಬಗಳಲ್ಲಿ 3,300 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಉಳಿದಂತೆ 850 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ. ಜೊತೆಗೆ ಚೀನಿಹಡ್ಲು, ಬೊಮ್ಮಾಡು ಮತ್ತಿತರ ನಾಲ್ಕು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದೆ ಎಂದು ತಿಳಿಸಿದರು.
ಮಾಲಂಬಿ ಹಾಡಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸಬೇಕು ಎಂದು ಸರೋಜಮ್ಮ ಗಮನ ಸೆಳೆದರು.
ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು, ವಿದ್ಯುತ್ ಮಾರ್ಗ ಹೋಗಿರುವ ಕಡೆ ಆಗಾಗ ಗಮನಿಸಬೇಕಿದೆ. ವಿದ್ಯುತ್ ತಂತಿಗಳು ಮರಕ್ಕೆ ತಾಗುವ ಹಾಗೂ ನೆಲಕ್ಕೆ ಬೀಳುವ ಹಂತದಲ್ಲಿದ್ದು, ಈ ಬಗ್ಗೆ ಪರಿಶೀಲಿಸಬೇಕಿದೆ ಎಂದು ತಿಳಿಸಿದರು.
ಸದಸ್ಯರಾದ ಪಂಕಜ ಅವರು ಮಾತನಾಡಿ, ಹಾಡಿಗಳಲ್ಲಿ ಐಟಿಡಿಪಿ ಇಲಾಖೆಯಿಂದ ಸಾಕಷ್ಟು ಕೆಲಸಗಳು ಆಗುತ್ತಿವೆ. ಅದಕ್ಕೆ ಸೆಸ್ಕ್ ಇಲಾಖೆಯವರು ಅಗತ್ಯ ಸಹಕಾರ ನೀಡಬೇಕಿದೆ. ಜಿಲ್ಲೆಯ ಹಲವು ಹಾಡಿಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಗಿರಿಜನರು ಇನ್ನೂ ಸಹ ಸಂಕಷ್ಟದಲ್ಲಿ ಬದುಕು ನಡೆಸುತ್ತಿದ್ದಾರೆ. ವೀರಾಜಪೇಟೆ ತಾಲೂಕಿನ 56 ಹಾಡಿಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕ ತಲುಪಿಲ್ಲ. ನಮ್ಮ ಅವಧಿ ಮುಗಿಯುತ್ತಾ ಬರುತ್ತಿದೆ ಎಂದು ನೋವು ತೋಡಿಕೊಂಡರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ಭವ್ಯಾ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಆರ್.ಮಂಜುಳಾ, ಸದಸ್ಯರಾದ ಎಚ್.ಆರ್.ಶ್ರೀನಿವಾಸ್, ಲೀಲಾವತಿ, ಯಾಲದಾಳು ಪದ್ಮಾವತಿ, ಕುಮುದಾ ಧರ್ಮಪ್ಪ, ಬಿ.ಜೆ.ದೀಪಕ್, ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅವರು ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss