ಹೊಸ ದಿಗಂತ ವರದಿ , ಶಿವಮೊಗ್ಗ:
ಚಳಿಗಾಲದ ಕೊನೆಯ ವೇಳೆಗೆ ಬಿಸಿಲ ಝಳ ಹೆಚ್ಚಿದಂತೆ ಮಲೆನಾಡಿನ ಕಾಡುಗಳಲ್ಲಿ ಕಾಡ್ಗಿಚ್ಚಿನ ಭೀತಿ ಪ್ರತಿ ವರ್ಷವೂ ಕಾಡುತ್ತದೆ. ಇದನ್ನು ಮನಗಂಡು ಶಿವಮೊಗ್ಗದ ಪರೋಪಕಾರಂ, ಉತ್ತಿಷ್ಟ ಭಾರತ ಹಾಗೂ ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ ತಂಡದ ಸದಸ್ಯರು ತಾಲೂಕಿನ ಕುಂಸಿ ರಕ್ಷಿತ ಅರಣ್ಯದಲ್ಲಿ ಭಾನುವಾರ ಕಾಡಿಗೆ ಬೆಂಕಿ ಬೀಳುವುದನ್ನು ತಪ್ಪಿಸಲು ಅರಣ್ಯ ಪ್ರದೇಶದ ಸುತ್ತ ಸ್ವಚ್ಛತಾ ಕಾರ್ಯ ನಡೆಸಿದರು.
ಶಿವಮೊಗ್ಗದಿಂದ ಎರಡು ಬಸ್ಗಳಲ್ಲಿ ಆಗಮಿಸಿದ್ದ ನೂರಕ್ಕೂ ಹೆಚ್ಚು ಸ್ವಯಂಸೇವಕರು ಬೆಳಿಗ್ಗೆ 7.30 ಕ್ಕೆ ಕುಂಸಿ ರಕ್ಷಿತ ಅರಣ್ಯವನ್ನು ಪ್ರವೇಶಿಸಿದರು. ಈ ವೇಳೆ ಆಯನೂರು ವಲಯ ಅರಣ್ಯಾಧಿಕಾರಿಗಳ ಕಚೇರಿ ಆರ್ಎಫ್ಒ ರವಿ ಮತ್ತವರ ಸಿಬ್ಬಂದಿ ತಂಡದ ಸದಸ್ಯರನ್ನು ಬರಮಾಡಿಕೊಂಡರು.
ಅರಣ್ಯ ಪ್ರದೇಶದ ವಿವಿಧ ಕಡೆಗಳಲ್ಲಿ ಕಾಡಿಗೆ ಬಿದ್ದ ಬೆಂಕಿ ಬೇಗನೇ ಹರಡದಂತೆ ತಡೆಯುವ ಸಲುವಾಗಿ ಬಿದ್ದ ತರಗೆಲೆಗಳನ್ನು ಬೇರ್ಪಡಿಸಿದರು. ಬೆಳಿಗ್ಗೆ 7.30 ರಿಂದ 9.30ರ ವರೆಗೆ ಸುಮಾರು ಎರಡು ಗಂಟೆಗಳ ಕಾಲ ಅರಣ್ಯ ಪ್ರದೇಶದಲ್ಲಿ ಬೆಂಕಿ ನಂದಿಸುವ ಪಟ್ಟಿ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು.