Saturday, July 2, 2022

Latest Posts

ಕಾದಿರಿಸಿದ ಜಾಗದಲ್ಲಿ ನಿವೇಶನ ನೀಡುವುದಕ್ಕೂ ವಿಳಂಬ: ಕೂಡಿಗೆ ಗ್ರಾ.ಪಂ. ಕಾರ್ಯವೈಖರಿಗೆ ಗ್ರಾಮಸ್ಥರ ಅಸಮಾಧಾನ

ಕುಶಾಲನಗರ: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನೂರಾರು ವಸತಿ ರಹಿತರಿಗೆ ನಿವೇಶನ ನೀಡುವ ಉದ್ದೇಶದಿಂದ ಹುದುಗೂರು ಮತ್ತು ಬ್ಯಾಡಗೊಟ್ಟ ಗ್ರಾಮದಲ್ಲಿ ಮೂರು ವರ್ಷಗಳಿಂದ ಜಾಗವನ್ನು ಕಾದಿರಿಸಲಾಗಿದ್ದರೂ, ಇದುವರೆಗೂ ಯಾವುದೇ ಪ್ರಕ್ರಿಯೆ ನಡೆಯದೆ ನಿವೇಶನ ರಹಿತರು ನಿರಾಸೆ ಅನುಭವಿಸುವಂತಾಗಿದೆ.
ಕಳೆದ ಐದು ವರ್ಷಗಳಿಂದ ಸರಕಾರ ನಿಯಮಾನುಸಾರ ವರ್ಷಕ್ಕೆರಡು ಗ್ರಾಮ ಸಭೆಗಳನ್ನು ನಡೆಸಲಾಗುತ್ತಿದೆ. ಸಭಾ ಸೂಚನಾ ಪತ್ರದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಬಗ್ಗೆ ಚರ್ಚೆ ಮತ್ತು ಅವರುಗಳಿಂದ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯಕ್ರಮ ಎಂದು ಮುದ್ರಿಸಲಾಗುತ್ತಿದೆ. ಅದರಂತೆ ಕಳೆದ ಐದು ವರ್ಷಗಳಿಂದ ನಿವೇಶನಕಾಗಿ ಸಾವಿರಾರು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆದರೆÉ ಆ ಅರ್ಜಿಗಳು ಎಲ್ಲಿಗೆ ಹೋದವು ಎಂಬುದು ಅರ್ಜಿದಾರರ ಪ್ರಶ್ನೆಯಾಗಿದೆ. ಅಲ್ಲದೆ ಕಾದಿರಿಸಿದ ಜಾಗ ಮಾತ್ರ ಕಾಡುಮಯವಾಗಿದೆ.
ನಿವೇಶನ ರಹಿತರು ಕೆಲವು ಪೃಸಾರಿ ಜಾಗವನ್ನು ಗುರುತಿಸಿ ಮನೆ ನಿರ್ಮಾಣ ಮಾಡಲು ಮುಂದಾದರೆ ಗ್ರಾಮ ಪಂಚಾಯತಿ ಅಧಿಕಾರಿಗಳಿಂದ ತೊಂದರೆ ಎದುರಾಗುತ್ತಿವೆ ಎಂದು ಈ ವ್ಯಾಪ್ತಿಯ ನೂರಾರು ನಿವೇಶನ ರಹಿತ ಗ್ರಾಮಸ್ಥರು ದೂರಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಸರ್ವೆ ನಂಬರ್ 11/2ರಲ್ಲಿ ಜಾಗ ಗುರುತಿಸಿ ಗ್ರಾಮ ಪಂಚಾಯತಿ ಮಾಸಿಕ ಸಭೆಯಲ್ಲಿ ಅರ್ಹ ಫಲಾನುಭವಿಗಳನ್ನು ಅಯ್ಕೆ ಮಾಡಿದ್ದರೂ, ಈ ಹಿಂದೆ ಇದ್ದ ಆಡಳಿತ ಮಂಡಳಿಯವರು ನಿವೇಶನ ನೀಡಲ ಮುಂದಾಗಿಲ್ಲ. ಕಾರಣ ಆಯ್ಕೆಯ ಗೊಂದಲ. ಆದರೆ ಸರಕಾರದ ನಿಯಮಾನುಸಾರ ಅಧಿಕಾರಿಗಳು ನೀಡಬೇಕೆಂಬ ಆದೇಶವಿದ್ದರೂ ಸಹ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗುತ್ತಿಲ್ಲಾ ಎಂಬುದು ನಿವೇಶನ ರಹಿತರ ಅರೋಪವಾಗಿದೆ.
ಕೂಡಿಗೆ ಗ್ರಾಮ ಪಂಚಾಯತಿಗೆ ನಾಲ್ಕು ವರ್ಷಗಳಿಗೆ ನಾಲ್ಕು ಮಂದಿ ಅಭಿವೃದ್ಧಿ ಅಧಿಕಾರಿಗಳಾಗಿದ್ದಾರೆ. ಇದೀಗ ಕಾರ್ಯದರ್ಶಿಯೇ ಅಭಿವೃದ್ಧಿ ಅಧಿಕಾರಿಯ ಜವಾಬ್ದಾರಿ ನಿರ್ವಹಿಸುತ್ತಿದ್ದು, ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.
ಖಾಯಂ ಅಭಿವೃದ್ಧಿ ಅಧಿಕಾರಿಯ ನೇಮಕವಾಗದೆ ಜಮಾಬಂದಿ ಕಾರ್ಯಕ್ರಮ ನಡೆದಿಲ್ಲ. ಸಾರ್ವಜನಿಕ ಕಾಮಗಾರಿಗಳನ್ನು ಕೈಗೊಳ್ಳುವ ಗ್ರಾಮ ಪಂಚಾಯತಿ ಖರ್ಚು ವೆಚ್ಚದ ಲೆಕ್ಕಪತ್ರವನ್ನೂ ಇದುವರೆಗೆ ನೀಡಿಲ್ಲ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಮತ್ತು ತಾಲೂಕು ಕಾರ್ಯನಿರ್ವಾಹಣಾಧಿಕಾರಿನವರು ಅಭಿವೃದ್ಧಿ ಅಧಿಕಾರಿಯನ್ನು ನೇಮಕ ಮಾಡಿ ಗ್ರಾಮದ ಪ್ರಗತಿಗೆ ಸಹಕರಿಸಬೇಕು. ಅಲ್ಲದೆ ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಗುರುತಿಸಲ್ಪಟಿರುವ ಜಾಗಗಳಲ್ಲಿ ಮನೆ ನಿರ್ಮಿಸಲು ಅನುಕೂಲ ಮಾಡಬೇಕೆಂದು ಈ ವ್ಯಾಪ್ತಿಯ ನೂರಾರು ಗ್ರಾಮಸ್ಥರ ಆಗ್ರಹವಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss