ಹೊಸದಿಗಂತ ವರದಿ,ಶಿವಮೊಗ್ಗ:
ಕಾನೂನು ಚೌಕಟ್ಟು ಬಿಟ್ಟು ಯಾರೇ ಗಣಿಗಾರಿಕೆ ನಡೆಸಿದರೂ ಅಂಥವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಕಲ್ಲು ಕ್ವಾರೆಯಲ್ಲಿ ಸ್ಪೋಟಗೊಂಡ ಹುಣಸೋಡಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಬಾಹಿರ ಗಣಿಗಾರಿಕೆ ಬಗ್ಗೆ ಈಗಾಗಲೇ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಆದರೂ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಉನ್ನತ ಮಟ್ಟದ ಸಮಿತಿ ನೇಮಿಸಲಾಗುತ್ತದೆ ಎಂದರು.
ಉನ್ನತ ಮಟ್ಟದ ಸಮಿತಿ ನೇಮಕ ಮಾಡಿ ತನಿಖೆ ನಡೆಸಲು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಆದೇಶ ನೀಡಿದ್ದಾರೆ. ಅದರಂತೆ ಸಮಿತಿ ನೇಮಕ ಮಾಡಿ ತನಿಖೆ ನಡೆಸಲಾಗುತ್ತದೆ. ವರದಿ ಬಳಿಕ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಹುಣಸೋಡಿನಲ್ಲಿ ಸ್ಪೋಟ ಸಂಭವಿಸಿರುವ ಕ್ವಾರೆ ಅನಧಿಕೃತವೆಂದು ಗೊತ್ತಾಗಿದೆ. ಈಗಾಗಲೇ ಅನಧಿಕೃತ ಕ್ವಾರೆಗಳ ಬಗ್ಗೆ ಜಿಲ್ಲಾಡಳಿತ ನೋಟೀಸ್ ನೀಡಿ ಕ್ರಮಕೈಗೊಂಡಿದೆ. ಆದರೂ ಇಂತಹ ಅನಾಹುತವಾಗಿದೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಸಿಎಂ ಪರಿಹಾರ ಘೋಷಣೆ ಮಾಡಿದ್ದಾರೆ. ಕ್ವಾರೆ ಮಾಲೀಕರಿಂದ ಹೆಚ್ಚಿನ ಪರಿಹಾರ ಮೃತರ ಕುಟುಂಬಗಳಿಗೆ ಕೊಡಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುತ್ತದೆ ಎಂದ ಅವರು, ಸ್ಪೋಟಕಗಳನ್ನು ಸಾಗಿಲು ಹಾಗೂ ದಾಸ್ತಾನು ಮಾಡಲು ಒಂದು ಮಾನದಂಡ ಇದೆ. ಆದರೆ ಇಲ್ಲಿ ಆ ಮಾನದಂಡ ಪಾಲನೆಯಾಗಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಎಲ್ಲದರ ಬಗ್ಗೆಯೂ ಸಂಪೂರ್ಣ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು.
ಈ ಘಟನೆಯಲ್ಲಿ ಐದು ಜನ ಮೃತಪಟ್ಟಿದ್ದು, ಇನ್ನೊಬ್ಬರ ಬಗ್ಗೆ ಶಂಕೆ ಇದೆ. ಎಲ್ಲಾ ಕಾರ್ಮಿಕರ ಗುರುತಿಸುವ ಕೆಲಸ ನಡೆಯುತ್ತಿದೆ. ಘಟನೆ ನಡೆದು 24 ಗಂಟೆ ಒಳಗಾಗಿ ಮೃತಪಟ್ಟವರ ಹೆಸರು ಮತ್ತು ಊರು ಬಹಿರಂಗ ಮಾಡಲಾಗುತ್ತದೆ ಎಂದರು.