Thursday, June 30, 2022

Latest Posts

ಕಾಫಿಗೆ ಪ್ರತ್ಯೇಕ ಪ್ಯಾಕೇಜ್ ರೂಪಿಸುವುದು ಜನಪ್ರತಿನಿಧಿಗಳ ಹೊಣೆ: ಸಭೆಯಲ್ಲಿ ಆಗ್ರಹ

ಹೊಸ ದಿಗಂತ ವರದಿ, ಪೊನ್ನಂಪೇಟೆ :

ಕಳೆದ ಎರಡೂವರೆ ದಶಕದಿಂದ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಉಳಿವಿಗೆ ಮುಂಬರುವ ರಾಜ್ಯ ಮತ್ತು ಕೇಂದ್ರ ಬಜೆಟ್‍ನಲ್ಲಿ ಪ್ರತ್ಯೇಕ ಪ್ಯಾಕೇಜ್ ರೂಪಿಸಿ ಜಾರಿಗೆ ತರುವುದು ಜನಪ್ರತಿನಿಧಿಗಳ ಹೊಣೆಯಾಗಬೇಕು. ಬೆಳೆಗಾರರ ಪರವಾಗಿ ಜಿಲ್ಲೆಯ ಶಾಸಕರು ಮತ್ತು ಸಂಸದರು ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಸರಕಾರದೊಂದಿಗೆ ಪ್ರಾಮಾಣಿಕವಾಗಿ ವ್ಯವಹರಿಸಿದಾಗ ಮಾತ್ರ ಇದು ಸಾಧ್ಯವಾಗಲಿದೆ. ಆದ್ದರಿಂದ ಜನಪ್ರತಿನಿಧಿಗಳ ನೇತೃತ್ವದಲ್ಲಿಯೇ ತುರ್ತಾಗಿ ಕಾಫಿ ಬೆಳೆಗಾರರಿಗೆ ವಿಶೇಷ ಯೋಜನೆ ರೂಪಿಸಲು ಮುಂದಾಗಬೇಕೆಂದು ಒತ್ತಾಯಿಸಲು ಕೊಡಗು ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ನಡೆದ ವಿವಿಧ ಬೆಳೆಗಾರ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಗೋಣಿಕೊಪ್ಪ ದಿ ಸ್ಪೈಸ್ ರಾಕ್ ಹೊಟೇಲ್ ಸಭಾಂಗಣದಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಜ.25 ರಂದು ಜಿಲ್ಲೆಯ ಶಾಸಕರುಗಳನ್ನು ಭೇಟಿ ಮಾಡಿ ಮುಂಬರುವ ಬಜೆಟ್‍ನಲ್ಲಿ ಕಾಫಿ ಬೆಳೆಗಾರರ ಚೇತರಿಕೆಗೆ ತುರ್ತಾಗಿ ವಿಶೇಷ ಪ್ಯಾಕೇಜ್ ಪ್ರಕಟಿಸುವ ನಿಟ್ಟಿನಲ್ಲಿ ಜವಾಬ್ದಾರಿಕೆ ವಹಿಸಿಕೊಂಡು ಬೆಳೆಗಾರರ ಹಿತ ಕಾಪಾಡುವಂತೆ ಮನವಿ ಸಲ್ಲಿಸಲು ನಿರ್ಧರಿಸಲಾಯುತು
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿರುವುದರಿಂದ ಮತ್ತು ಶಾಸಕರು ಮತ್ತು ಸಂಸದರು ಆಡಳಿತ ಪಕ್ಷದವರಾಗಿರುವುದರಿಂದ ಜಿಲ್ಲೆಯ ಬೆಳೆಗಾರರಿಗೆ ವಿಶೇಷ ಯೋಜನೆ ತರುವುದು ಕಷ್ಟವಾಗುವುದಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
ಹಿಂದೆ ಇದ್ದ ಮಾರುಕಟ್ಟೆ ದರವನ್ನೇ ಕಾಫಿ ಬೆಳೆಗಾರರು ಪ್ರಸ್ತುತ ಪಡೆಯುತ್ತಿದ್ದು ಉತ್ಪಾದನಾ ವೆಚ್ಚ ಅತಿ ಹೆಚ್ಚಾಗಿದೆ. ಇದರ ನಡುವೆ ನಿರಂತರ ಪ್ರಾಕೃತಿಕ ವಿಕೋಪ, ಅತಿವೃಷ್ಟಿ-ಅನಾವೃಷ್ಟಿ, ವನ್ಯಪ್ರಾಣಿಗಳ ಹಾವಳಿ, ಫಸಲು ಕುಂಠಿತ, ಕಾರ್ಮಿಕರ ಅಭಾವ ಸೇರಿದಂತೆ ಹಲವು ಸಮಸ್ಯೆಯಿಂದ ದುಸ್ಥಿತಿಗೆ ತಲುಪಿರುವ ಕಾಫಿ ಬೆಳೆಗಾರರ ರಕ್ಷಣೆಗೆ ಮುಂಬರುವ ಬಜೆಟ್‍ನಲ್ಲಿ ವೈಜ್ಞಾನಿಕ ಬೆಂಬಲ ಬೆಲೆಯೊಂದಿಗೆ ವಿಶೇಷ ಪ್ಯಾಕೇಜ್ ರೂಪಿಸಲು ಜಿಲ್ಲೆಯ ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು. ಇದಕ್ಕಾಗಿ ಜಿಲ್ಲೆಯ ಶಾಸಕರನ್ನು ಭೇಟಿ ಮಾಡಿ ಬೆಳೆಗಾರರ ಸಂಘಟನೆಗಳಿಂದ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಕಳೆದ 25 ವರ್ಷದಿಂದ ಪ್ರತಿ 50 ಕೆ.ಜಿ.ಗೆ ಬೆಳೆಗಾರರಿಗೆ ಸರಾಸರಿ 1500 ರಿಂದ 2000 ರೂ. ದೊರೆತಂತಾಗಿದೆ. ಪ್ರಸಕ್ತ ವರ್ಷ 3000 ಆಸುಪಾಸಿನಲ್ಲಿ ದರ ಇದ್ದು, ಪ್ರತಿ ಎಕರೆ ಕಾಫಿ ಉತ್ಪಾದನಾ ವೆಚ್ಚ 62 ಸಾವಿರ ರೂ. ಗಳಿಗಿಂತಲೂ ಅಧಿಕವಾಗಿದೆ. ಪ್ರಸ್ತುತ ಇರುವ ಮಾರುಕಟ್ಟೆ ದರದಿಂದ ಕಾಫಿ ಬೆಳೆಗಾರರಿಗೆ ಯಾವುದೇ ಲಾಭವಿಲ್ಲದೆ ಪ್ರತಿ ಎಕರೆಗೆ ದೊಡ್ಡ ಮಟ್ಟದ ನಷ್ಟವಾಗುತ್ತಿದೆ. ಒಂದು ಕಡೆ ಉತ್ತಮ ಮಾರುಕಟ್ಟೆ ಇಲ್ಲ. ಇನ್ನೊಂದು ಕಡೆ ಕಾಫಿ ಫಸಲು ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಸಭೆಯಲ್ಲಿ ಪ್ರಮುಖರು ಆತಂಕ ವ್ಯಕ್ತಪಡಿಸಿದರು.
ಕಳೆದ 3 ವರ್ಷದಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದ್ದು, ಇದೀಗ ಅಕಾಲಿಕ ಮಳೆಯಿಂದ ಅಪಾರ ಹಾನಿಯಾಗಿದೆ. ಮುಂದಿನ ವರ್ಷದ ಫಸಲಿನ ಮೇಲೆಯೂ ಇದು ಪ್ರತೀಕೂಲ ಪರಿಣಾಮ ಸೃಷ್ಟಿಸಿದೆ. ಇಷ್ಟೆಲ್ಲ ಸಂಕಷ್ಟ ಅನುಭವಿಸಿದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದುವರೆಗೆ ಯಾವುದೇ ವಿಶೇಷ ಪ್ಯಾಕೇಜ್ ಪ್ರಕಟಿಸುವ ಮತ್ತು ಬೆಂಬಲ ಬೆಲೆ ಘೋಷಿಸುವ ಮೂಲಕ ಬೆಳೆಗಾರರ ರಕ್ಷಣೆಗೆ ಮುಂದಾಗಿಲ್ಲ. ಕೇರಳ ಸರಕಾರ ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ಮಧ್ಯ ಪ್ರವೇಶಿಸಿ ಬೆಳೆಗಾರರ ಚೇತರಿಕೆಗೆ ವಿಶೇಷ ಯೋಜನೆ ರೂಪಿಸಿದೆ. ಕಾಫಿ ವಾಣಿಜ್ಯ ಬೆಳೆ ಎಂದು ಕೇಂದ್ರ ಸರಕಾರವೇ ಕಾಫಿ ಬೆಳೆಗಾರರಿಗೆ ನ್ಯಾಯ ಒದಗಿಸಬೇಕೆನ್ನುವ ತಪ್ಪು ಪದ್ಧತಿಯನ್ನು ಕೇರಳ ಸರಕಾರ ಬದಿಗೆ ಸರಿಸಿ ನೆರವಿಗೆ ನಿಂತಿರುವುದು ಸ್ವಾಗತಾರ್ಹವಾಗಿದೆ. ಇದೇ ರೀತಿಯಲ್ಲಿ ಕಾಫಿ ಬೆಳೆಗಾರರ ರಕ್ಷಣೆಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ಮುಂಬರುವ ಬಜೆಟ್‍ನಲ್ಲಿ ಪ್ರತ್ಯೇಕವಾಗಿ ಸೂಕ್ತ ನೆರವಿನ ಯೋಜನೆ ರೂಪಿಸಲು ಜಿಲ್ಲೆಯ ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ಒತ್ತಡ ಹಾಕಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸತತ ಮೂರು ವರ್ಷದಿಂದ ಪ್ರಾಕೃತಿಕ ವಿಕೋಪಕ್ಕೆ ಮತ್ತು ಮಳೆಗಾಲದಲ್ಲಿ ಅತಿವೃಷ್ಟಿ, ಇದೀಗ ಅಕಾಲಿಕ ಮಳೆಯಿಂದ ಬೆಳೆ ನಷ್ಟಗೊಂಡು ಕಂಗಾಲಾಗಿರುವ ಕಾಫಿ ಬೆಳೆಗಾರರಿಗೆ ಇದೀಗ ಕಾಫಿ ಕಟಾವು ಸಮಯದಲ್ಲಿ ಹೋರಾಟ ಮಾಡಲು ಜನಪ್ರತಿನಿಧಿಗಳು ಅವಕಾಶ ನೀಡಬಾರದು. ಆದ್ದರಿಂದ ಬೆಳೆಗಾರರ ಪರವಾಗಿ ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ವ್ಯವಹರಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಕೊಡಗು ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್‍ಮಾದಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ರಾಜ್ಯ ಅರಣ್ಯ ಅಭಿವೃದ್ಧಿ ಮಂಡಳಿಯ ಮಾಜಿ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ, ಕಾರ್ಯದರ್ಶಿ ಗೌತಮ್ ಪೊನ್ನಪ್ಪ, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಕೊಡಗು ಬೆಳೆಗಾರ ಒಕ್ಕೂಟದ ಸ್ಥಾಪಕ ಸದಸ್ಯ ಅಧ್ಯಕ್ಷ ಮಾಣಿರ ಮುತ್ತಪ್ಪ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ, ಚಿಮ್ಮಣಮಾಡ ರಾಜ, ಕೊಡಗು ಸಂರಕ್ಷಣಾ ವೇದಿಕೆಯ ಸಂಚಾಲಕ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ, ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಮೈಸೂರಿನ ಕೊಡವ ಒಗ್ಗಟ್ಟ್ ಸಂಘಟನೆಯ ಜಮ್ಮಡ ಗಣೇಶ್ ಅಯ್ಯಣ್ಣ, ಬೆಳೆಗಾರ ಒಕ್ಕೂಟದ ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ ಮಲ್ಲಮಾಡ ಪ್ರಭು, ಕಾಫಿ ಬೆಳೆಗಾರ ಮಾಪಂಗಡ ಎಂ.ಬೆಳ್ಯಪ್ಪ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss