ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಇಲ್ಲದಿದ್ದರೆ ಕಾನೂನು ಕ್ರಮ: ಸಚಿವ ಭೈರತಿ ಬಸವರಾಜ

0
16

ಕೊಪ್ಪಳ: ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ, ಬಡಾವಣೆ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿ ವಿಳಂಬವಿಲ್ಲದೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು ಇಲ್ಲದಿದ್ದರೆ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಸಚಿವ ಭೈರತಿ ಎ. ಬಸವರಾಜ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಇಂದು ನಗರಾಭಿವೃದ್ಧಿ ಪ್ರಾಧಿಕಾರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಯಾವುದೇ ತೊಂದರೆ ಇಲ್ಲ. ಆದರೆ ಒಳಚರಂಡಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ಸಮಯವೂ ವ್ಯರ್ಥವಾಗುತ್ತಿದೆ. ಆದ್ದರಿಂದ ಇನ್ನು ಒಂದು ತಿಂಗಳೊಳಗೆ ಇದುವರೆಗಿನ ಕಾಮಗಾರಿ ಪ್ರಗತಿಯ ವರದಿಯೊಂದಿಗೆ ಬಾಕಿ ಉಳಿದ ಕಾಮಗಾರಿಯ ಅಂದಾಜು ವೆಚ್ಚದ ಡಿಪಿಆರ್ ಅನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಹಾಗೆಯೇ ಅಮೃತ್ ಯೋಜನೆಯಡಿ ಗಂಗಾವತಿಯ ತಾಲ್ಲೂಕಿನಲ್ಲಿನ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣವನ್ನು ಆಗಸ್ಟ್ ತಿಂಗಳ ಕೊನೆಗೆ ಪೂರ್ಣಗೊಳಿಸಬೇಕು. ಆಗಸ್ಟ್ನಲ್ಲಿ ನಾನು ವಿಶೇಷವಾಗಿ ಗಂಗಾವತಿಗೆ ಭೇಟಿ ನೀಡುತ್ತೇನೆ. ಅಷ್ಟರೊಳಗೆ ಕುಡಿಯುವ ನೀರು ಮತ್ತು ಒಳ ಚರಂಡಿಗೆ ಸಂಬoಧಿಸಿದ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿರಬೇಕು. ಇಲ್ಲವಾದರೆ ಸಂಬoಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರಸಭೆ ಮತ್ತು ಸ್ಥಳೀಯ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಮುಖ್ಯ. ಆದ್ದರಿಂದ ನಗರದ ಸ್ವಚ್ಛತೆ ಮತ್ತು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಿ.
ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಸಂಸದ ಸಂಗಣ್ಣ ಕರಡಿ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ, ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ರಾಮೇಶ್ವರ, ಕಲಬುರ್ಗಿ ವಿಭಾಗದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರರಾದ ಎಸ್.ಎನ್.ದಿನೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here