Tuesday, July 5, 2022

Latest Posts

ಕಾಯಕಕ್ಕೆ ಪಕ್ವವಾದ ಬದುಕು ಇವರದು: ಶಾಲೆಗೆ ರಜೆ ಇದ್ದಾಗ ನಾನು ಕೆಲಸಕ್ಕೆ ಬರುತ್ತೇನೆ!!

ನಾನು ಕೊಟ್ಟ ಇಪ್ಪತ್ತು ರೂಪಾಯಿ ಹಿಡಿದು ಖುಷಿಯಾಗಿ, ಮತ್ತೆ ಯಾವಾಗ ಕೆಲಸ ಇದ್ದರೂ ಹೇಳಿ ಎನ್ನುತ್ತಾ, ಮುಂದಿನ ಸಾಲಿನಲ್ಲಿದ್ದ ಒಂದು ಮನೆ ತೋರಿಸಿ, ನಮ್ಮ ಅಮ್ಮ ಆ ಮನೆ ಕೆಲಸಕ್ಕೆ ಬರುತ್ತಾಳೆ. ಹೇಳಿ ಕಳಿಸಿ, ಶಾಲೆಗೆ ರಜೆ ಇದ್ದಾಗ ನಾನು ಕೆಲಸಕ್ಕೆ ಬರುತ್ತೇನೆ ಎಂದಾಗ ಆ ಪುಟ್ಟ ಹುಡುಗನ ಸ್ವಾಭಿಮಾನಕ್ಕೆ ಮನ ಮೂಕವಾಗಿತ್ತು.

-ನಳಿನಿ. ಟಿ. ಭೀಮಪ್ಪ

ಬೆಳಿಗ್ಗೆ ದಿನಪತ್ರಿಕೆಗಾಗಿ ಕಾಯುತ್ತಿದ್ದೆವು. ಎಂಟಾದರೂ ಸುಳಿವಿಲ್ಲ. ಮಳೆ ಬೇರೆ ಜೋರಾಗಿ ಬಿಟ್ಟು ಬಿಡದಂತೆ ರಪರಪನೆ ಹೊಡೆಯುತ್ತಿತ್ತು. ಇಂಥವರನ್ನು ಕೆಲಸಕ್ಕೆ ಯಾಕಾದರೂ ಇಟ್ಟುಕೊಳ್ಳುತ್ತಾರೋ, ಸ್ವಲ್ಪ ಬೆಳಿಗ್ಗೆ ಬೇಗ ಎದ್ದು ಬರುವುದಕ್ಕೇನು ದಾಡಿ, ಮಳೆಯೂ ಆಗ ಕಡಿಮೆ ಇತ್ತು ಎಂದು ಪೇಪರ್ ಹಾಕುವವನನ್ನು ಬೈಯ್ಯುತ್ತಲೇ ಕಾಫಿ ಕುಡಿದಿದ್ದಾಯಿತು. ಸ್ವಲ್ಪ ಹೊತ್ತಿಗೆ ಕರೆಗಂಟೆಯ ಸದ್ದಿನೊಂದಿಗೆ ಆಂಟೀ, ಆಂಟೀ ಎನ್ನುವ ಕೂಗು ಕೇಳಿಸಿತು. ಹೊರಗೆ ಹೋಗಿ ನೋಡಿದರೆ ಹದಿನಾಲ್ಕರ ಹುಡುಗ, ಜರ್ಕಿನ್ ಹಾಕಿಕೊಂಡು ತಲೆಯನ್ನು ಕವರ್ ಮಾಡಿಕೊಂಡು, ಕೈಯ್ಯಲ್ಲಿ ಸುರುಳಿ ಸುತ್ತಿ, ದಾರ ಕಟ್ಟಿದ ಪೇಪರ್ ಹಿಡಿದು ನಿಂತಿದ್ದ. ಪ್ರತಿದಿನ ಈ ಪುಟ್ಟ ಹುಡುಗನಾ ಪೇಪರ್ ಹಾಕುವುದು ಎಂದು ಅಚ್ಚರಿಯಾಗಿ ವಿಚಾರಿಸಿದೆ. ಇಲ್ಲಾ ಆಂಟೀ, ನಮ್ಮ ಅಣ್ಣ ಹಾಕುವುದು, ಅವನಿಗೆ ಬೇರೆ ಕೆಲಸ ಇದ್ದುದ್ದಕ್ಕೆ ನಾನೇ ಬಂದೆ ಎಂದ.

ಮಳೆಯಿಂದ ತೊಪ್ಪೆಯಾಗಿ ತೊಟ್ಟಿಕ್ಕುತ್ತಿದ್ದ ಹನಿಗಳನ್ನು ಆಗ್ಗಾಗ್ಗೆ ಒರೆಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಾ ಆಂಟೀ, ಎದುರು ಮನೆಯವರು ಗೇಟ್ ಬೀಗ ಇನ್ನೂ ತೆರೆದಿಲ್ಲ, ಪೇಪರ್ ಎಸೆದರೆ ನೆನೆದು ಬಿಡುತ್ತದೆ, ನನಗೆ ಸ್ಕೂಲಿಗೆ ಬೇರೆ ಲೇಟಾಗುತ್ತದೆ, ಸ್ವಲ್ಪ ನೀವೇ ಕೊಡ್ತೀರಾ ಎಂದು ಮುಗ್ದತೆಯಿಂದ ಕೇಳಿದಾಗ ಆಯಿತು ಕೊಡು ಎಂದು ಹೇಳಿ ತೆಗೆದುಕೊಂಡೆ. ಖುಷಿಯಿಂದ ಮತ್ತೆ ಪ್ಲಾಸ್ಟಿಕ್ ಕವರಿನಲ್ಲಿ ಹುದುಗಿದ್ದ ಮುಂದಿನ ಮನೆಗೆ ಕೊಡಬೇಕಾದ ಮತ್ತೊಂದು ದಿನಪತ್ರಿಕೆ ಸುರುಳಿಯನ್ನು ಜರ್ಕಿನ್ ಒಳಗೆ ಸಿಲುಕಿಸಿಕೊಂಡು, ದೊಡ್ಡ ನಿಲುಕಲಾರದ ಸೈಕಲ್ ಅನ್ನು ನಿಂತಿರುವ ಭಂಗಿಯಲ್ಲೇ ತುಳಿಯುತ್ತ ಸಾಗುವುದನ್ನೇ ನೋಡುತ್ತಿದ್ದೆ. ಪಾಪ! ಅದೆಷ್ಟು ಹೊತ್ತಿಗೆ ಎದ್ದಿದ್ದನೋ, ಒಂದೊಂದೇ ಪತ್ರಿಕೆಯನ್ನು ಸುರುಳಿ ಮಾಡಿ ದಾರ ಕಟ್ಟಿಕೊಂಡು ಬರುವುದಕ್ಕೆ ಲೇಟಾಗಿರಬೇಕು, ಛೆ! ಅವನ ಪರಿಸ್ಥಿತಿ ಅರಿಯದೆ ಸುಮ್ಮನೆ ಶಪಿಸಿದೆನಲ್ಲಾ ಎಂದು ಮನ ನೊಂದಿತು.

ಮತ್ತೊಂದು ದಿನ ಒಬ್ಬ ಹತ್ತು-ಹನ್ನೆರಡು ವರ್ಷದ ಹುಡುಗ ನಮ್ಮ ಮನೆಯ ಗೇಟನ್ನು ಅಲ್ಲಾಡಿಸುತ್ತಿದ್ದ. ಹಣೆಗೆ ವಿಭೂತಿ, ಭುಜಕ್ಕೆ ಜೋಳಿಗೆಯ ತರಹದ ಚೀಲವೊಂದನ್ನು ನೇತು ಹಾಕಿಕೊಂಡಿದ್ದ. ದಕ್ಷಿಣೆ ಕಾಸಿಗಾಗಿ ಬಂದಿರಬೇಕು ಎಂದುಕೊಂಡು, ಕಾಸು ಕೊಡಲು ಹೋದೆ. ಮುಖ ಉಬ್ಬಿಸಿ, ಬಿಲ್ಕುಲ್ ನಿರಾಕರಿಸಿ ನಾನೇನೂ ಭಿಕ್ಷುಕನಲ್ಲ, ಏನಾದರೂ ಕೆಲಸವಿದ್ದರೆ ಕೊಡಿ ಎಂದ. ಏನು ಕೆಲಸ ಮಾಡ್ತೀಯ ಎಂದಾಗ, ಕಂಪೌಂಡ್ ಕಸ ಹೊಡೆಯುವುದು, ಗಿಡಕ್ಕೆ ನೀರು ಹಾಕುವುದು, ತೆಂಗಿನ ಕಾಯಿ ಕೀಳುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಎಲ್ಲಾ ಮಾಡ್ತೀನಿ ಎಂದಾಗ ಅಚ್ಚರಿಯಾಯಿತು. ಸುತ್ತಮುತ್ತ ಕಂಪೌಂಡ್ ಹಾಗೂ ಮಾಳಿಗಿ ಮೆಟ್ಟಿಲುಗಳ ಕಸ ಹೊಡೆಯಲು ಹೇಳಿ ಪೊರಕೆ ಕೊಟ್ಟೆ. ಅದೆಷ್ಟು ಖುಷಿಯಾಗಿ ಎಲ್ಲವನ್ನೂ ಒಪ್ಪವಾಗಿ ಮಾಡಿ ಮುಗಿಸಿದ. ತಿಂಡಿ ತಿನ್ತೀಯಾ ಎಂದಾಗ ಹೂಂ ಗುಟ್ಟಿದ.

ತಿಂಡಿ ತಿಂದು, ನಾನು ಕೊಟ್ಟ ಇಪ್ಪತ್ತು ರೂಪಾಯಿ ಹಿಡಿದು ಖುಷಿಯಾಗಿ, ಮತ್ತೆ ಯಾವಾಗ ಕೆಲಸ ಇದ್ದರೂ ಹೇಳಿ ಎನ್ನುತ್ತಾ, ಮುಂದಿನ ಸಾಲಿನಲ್ಲಿದ್ದ ಒಂದು ಮನೆ ತೋರಿಸಿ, ನಮ್ಮ ಅಮ್ಮ ಆ ಮನೆ ಕೆಲಸಕ್ಕೆ ಬರುತ್ತಾಳೆ. ಹೇಳಿ ಕಳಿಸಿ, ಶಾಲೆಗೆ ರಜೆ ಇದ್ದಾಗ ನಾನು ಕೆಲಸಕ್ಕೆ ಬರುತ್ತೇನೆ ಎಂದಾಗ ಆ ಪುಟ್ಟ ಹುಡುಗನ ಸ್ವಾಭಿಮಾನಕ್ಕೆ ಮನ ಮೂಕವಾಗಿತ್ತು. ಹೀಗೆ ಅದೆಷ್ಟೋ ಜನ ಮಕ್ಕಳು ಶಾಲಾ ಬಿಡುವಿನ ಸಮಯದಲ್ಲಿ ತಮ್ಮ ಕೈಲಾದಷ್ಟು ಮನೆಯವರಿಗೆ ಸಹಾಯ ಮಾಡಿಕೊಡುತ್ತಾ, ತಾವೂ ಕೈ ಖರ್ಚಿಗೆ ಅಲ್ಪ ಸ್ವಲ್ಪ ಹಣ ಗಳಿಸುತ್ತಿರುತ್ತಾರೆ. ಮನೆ ಕೆಲಸಕ್ಕೆ ಬರುವ ಹೆಂಗಸರ ಹಿಂದೆ ಬರುವ ಅವರ ಚಿಕ್ಕ ಪುಟ್ಟ ಹೆಣ್ಣುಮಕ್ಕಳು ತಮ್ಮ ತಾಯಿ, ಅಜ್ಜಿ, ಅಕ್ಕಂದಿರಿಗೆ ತಮ್ಮ ಕೈಲಾಗುವ ಮಟ್ಟಿಗೆ ನೆರವಾಗುವುದನ್ನು ಕಂಡಾಗ ಬದುಕು ಚಿಕ್ಕ ವಯಸ್ಸಿನಲ್ಲಿ ಎಂಥೆಂಥ ಪಾಠ ಕಲಿಸಿಬಿಡುತ್ತದೆ ಎನಿಸಿದ್ದು ಸುಳ್ಳಲ್ಲ.

ಇವರನ್ನೆಲ್ಲಾ ನೋಡುವಾಗ ಗೆಳತಿಯೊಬ್ಬಳ ಮಾತು ನೆನಪಾಯಿತು. ನನ್ನ ತಮ್ಮ ಹತ್ತು ವರ್ಷವಾಯಿತು ಕಣೆ ಬೆಂಗಳೂರು ಸೇರಿ. ಮೂರ್ನಾಲ್ಕು ಡಿಗ್ರಿ ಮಾಡಿಕೊಂಡಿದ್ದಾನೆ. ಅವನಿಗೆ ತಕ್ಕದಾದ ಕೆಲಸ ಇನ್ನೂ ಸಿಕ್ಕಿಲ್ಲ. ಹುಡುಕುತ್ತಲೇ ಇದ್ದಾನೆ. ಅಪ್ಪನೇ ತಮ್ಮ ಪೆನ್ಷನ್ ದುಡ್ಡಿನಲ್ಲಿ ತಿಂಗಳಿಗೆ ಹತ್ತು ಸಾವಿರ ಅವನಿಗೆ ಕಳಿಸುತ್ತಾರೆ. ಹಳ್ಳಿಯಲ್ಲಿ ಅಪ್ಪ, ಅಮ್ಮ ಇಬ್ಬರೇ ಇದ್ದಾರೆ. ತೋಟ ಮಾಡಿಸುತ್ತಾರೆ. ಹಸು ಸಾಕಿದ್ದಾರೆ. ಹಾಗಾಗಿ ಕೊಟ್ಟಿಗೆಯ ಕೆಲಸವೂ ಹೆಚ್ಚು. ಕೆಲಸವಿಲ್ಲಾ ಎಂದು ಅವನಿಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲಾ ಎಂದು ಹಲುಬಿದಳು. ಆ ಮಾತು ಕೇಳಿ ಹತ್ತು ವರ್ಷದಿಂದ ಬೆಂಗಳೂರಿನಲ್ಲಿ ಅಲೆಯುವ ಬದಲು ಹಳ್ಳಿಯಲ್ಲಿ ಅಪ್ಪನ ತೋಟ, ಕೊಟ್ಟಿಗೆಗೆ ಸಹಾಯ ಮಾಡಿ ಬೆನ್ನೆಲುಬಾಗಿ ನಿಲ್ಲಬಹುದಲ್ಲ ಎಂಬ ಆಲೋಚನೆ ಹಾದು ಹೋಯಿತು.

ಹೀಗೆಯೇ ಬಹುತೇಕ ಮನೆಗಳಲ್ಲಿ ದುಡಿಯುವ ವಯಸ್ಸಿಗೆ ಬಂದು ನಿಂತ ಮಕ್ಕಳು, ಉಂಡಾಡಿ ಗುಂಡರ ಹಾಗೆ ತಮ್ಮಂತವರದೇ ಗುಂಪು ಕಟ್ಟಿಕೊಂಡು, ಬೀದಿ ಬೀದಿ ಸುತ್ತುತ್ತಾ, ಪೋಲಿ ಅಲೆಯುತ್ತಾ ಸಮಯ ಕೊಲ್ಲುತ್ತಿರುತ್ತಾರೆ. ಮನೆಯಲ್ಲಿ ಕೊಂಚ ಹೆಚ್ಚು ಕಡಿಮೆಯಾದರೂ ಸಹಿಸುವುದಿಲ್ಲ. ಮುದ್ದೆ, ನಿದ್ದೆ ಎರಡೂ ಗಡದ್ದಾಗಿ ಹೊಡೆದು, ಜಗತ್ತಿನಲ್ಲಿ ತಮಗೆ ಸರಿಯಾದ ಕೆಲಸವೇ ಸಿಕ್ಕುತ್ತಿಲ್ಲ ಎಂದು ಹಳಿಯುತ್ತಾ, ಸಿಕ್ಕ ಚಿಕ್ಕ ಪುಟ್ಟ ಕೆಲಸಗಳನ್ನು ತಮ್ಮ ಅರ್ಹತೆಗೆ ತಕ್ಕದಲ್ಲವೆಂದು ಪ್ರತಿಪಾದಿಸುತ್ತಾ ಬುದ್ಧಿ ಹೇಳಲು ಬಂದವರಿಗೆ ಕೆಲಸ ಕೊಡಿಸಿ, ಆಮೇಲೆ ಮಾತನಾಡಿ ಎಂಬ ಉಡೊಯ ಮಾತುಗಳನ್ನು ಆಡುವವರೇ ಹೆಚ್ಚು. ತಂದೆ ತಾಯಿಯರನ್ನೂ ಸಹ, ಹುಟ್ಟಿಸಿದರೆ ಸಾಕಾ, ಒಂದಿಷ್ಟು ಆಸ್ತಿ ಇಲ್ಲ, ಏನೂ ಇಲ್ಲ, ಅವರನ್ನು ನೋಡಿ ಮಕ್ಕಳಿಗೆ ಹೇಗೆ ಮಾಡಿಟ್ಟಿದ್ದಾರೆ ಎಂದು ಗೆಳೆಯರ, ಬಂಧುಗಳ ಉದಾಹರಣೆ ಕೊಡುತ್ತಾ ಹಂಗಿಸುತ್ತಿರುತ್ತಾರೆ. ತಮ್ಮ ಜವಾಬ್ದಾರಿಗಳನ್ನು ಅರಿಯದೆ, ತಂದೆ-ತಾಯಿ ಇರುವುದೇ ತಮ್ಮನ್ನು ಸಾಕುವುದಕ್ಕಾಗಿ ಎಂದು ದರ್ಬಾರು ಮಾಡುತ್ತಾ, ಏನಾದರೂ ಗದರಿದರೆ ಮನೆ ಬಿಟ್ಟು ಹೋಗುವೆನೆಂದೋ ಸಾಯುವೆನೆಂದೋ ಹೆದರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುತ್ತಾರೆ.

ಇಂಥವರ ಮುಂದೆ ಮೇಲಿನ ಉದಾಹರಣೆಯಲ್ಲಿ ಬರುವ ಚಿಕ್ಕ ಚಿಕ್ಕ ಮಕ್ಕಳು ಸ್ವಾಭಿಮಾನಿ ಬದುಕಿಗಾಗಿ ಹೋರಾಟ ಮಾಡುತ್ತಾ ಆಪ್ತರಾಗುತ್ತಾರೆ. ಜೀವನದ ಕಷ್ಟ, ಅವಮಾನ, ಬದುಕಿಗಾಗಿ ಹೋರಾಡುವ ಛಲ ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತಾ ಸಾಗುತ್ತದೆ. ನಿಜವಾಗಿಯೂ ಅಂಥವರ ಬದುಕು ಪ್ರತಿಯೊಬ್ಬರಿಗೆ ಮಾದರಿಯೇ ಸೈ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss