ಕಾರವಾರ: ಭಟ್ಕಳದ 69 ವರ್ಷದ ವ್ಯಕ್ತಿಯೋರ್ವ ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದು, ಈತನಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಇದರಿಂದಾಗಿ ಉ.ಕ ಜಿಲ್ಲೆಯಲ್ಲಿ ಕೊರೋನಾ ಪೀಡಿತರಾಗಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೇರಿದೆ.
ನಗರದ ಸುಲ್ತಾನ್ ಸ್ಟ್ರೀಟ್ ನಿವಾಸಿಯಾಗಿರುವ ಈ ವ್ಯಕ್ತಿಗೆ ಶನಿವಾರ ರಾತ್ರಿಉಸಿರಾಟದ ತೀವ್ರ ಸಮಸ್ಯೆ ಎದುರಾಗಿದ್ದು, ಖಾಸಿಗಿ ಆಸ್ಪತ್ರೆಯಲ್ಲಿ ಔಷಧಿ ತೆಗೆದುಕೊಂಡರೂ ಕಡಿಮೆಯಾಗಿಲ್ಲ. ಮಧ್ಯರಾತ್ರಿ ಸಮಸ್ಯೆ ಉಲ್ಬಣಿಸಿ ಈತ ಉಸಿರು ಚೆಲ್ಲಿದ್ದಾನೆ. ಭಾನುವಾರ ಈತನ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ತಾಲೂಕು ಆಡಳಿತ ಮನೆಯವರ ಸಹಕಾರದಲ್ಲಿ ಕೋವಿಡ್ -19 ನಿಯಮಾವಳಿ ಪ್ರಕಾರ ಶವವನ್ನು ದಫನ್ ಮಾಡಿದೆ. ಮೃತನ ಕುಟುಂಬಸ್ಥರು ಮತ್ತು ಸಂಪರ್ಕಿತರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ. ಭಟ್ಕಳದಲ್ಲಿ ನಡೆದ ಮೊದಲ ಅಧಿಕೃತ ಸಾವಿನ ಪ್ರಕರಣ ಇದಾಗಿದ್ದು, ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ ಐದಕ್ಕೇರಿದೆ.
13 ಪ್ರಕರಣ ಪತ್ತೆ
ಉ. ಕ ಜಿಲ್ಲೆಯಲ್ಲಿ ಭಾನುವಾರ 13 ಪ್ರಕರಣಗಳು ದೃಢವಾಗಿವೆ. ಕಾರವಾರ 5, ಭಟ್ಕಳ 3, ಶಿರಸಿ 2, ಕುಮಟಾ ಮತ್ತು ದಾಂಟೇಲಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.