ಕಾರವಾರ: ಭಟ್ಕಳದಲ್ಲಿ ಎರಡನೇ ಹಂತದಲ್ಲಿ ಕೊರೋನಾ ಸ್ಪೋಟಗೊಳ್ಳಲು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕವೇ ಕಾರಣ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಕೊರೋನಾ ದೃಡಪಟ್ಟಿದ್ದ 18 ವರ್ಷದ ಯುವತಿಯ ಅಕ್ಕ ಮತ್ತು ಭಾವ ತಮ್ಮ 5 ವರ್ಷದ ಮಗುವಿನ ಚಿಕಿತ್ಸೆಗೆ ಏ.20 ರಂದು ಈ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದರು. ಇವರ ಸಂಪರ್ಕದಿಂದ ಮೊದಲಿಗೆ ಯುವತಿಗೆ ಕೊರೋನಾ ಕಾಣಿಸಿಕೊಂಡಿದೆ. ಈಗ ಈ ಕುಟುಂಬ ಮತ್ತು ಅಕ್ಕಪಕ್ಕದ ಸುಮಾರು 60 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇದರಲ್ಲಿ ಈಗ ಈ ಯುವತಿಯ ಅಕ್ಕ, ಭಾವ, ಮಗು ಸೇರಿ ಒಂದೇ ಕುಟುಂಬದ ಹತ್ತು ಜನರಿಗೆ, ಪಕ್ಕದ ಮನೆಯ ವೃದ್ದನೋರ್ವನಿಗೆ ಮತ್ತು ಯುವತಿಯ ಗೆಳತಿಗೆ ಸೋಂಕು ದೃಢಪಟ್ಟಿದೆ.
ಇವರೆಲ್ಲರನ್ನು ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ರಚಿಸಿರುವ ಕೋವಿಡ್ -19 ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
ಕೊರೋನಾ ಕಾಣಿಸಿದ ಹಿನ್ನಲೆಯಲ್ಲಿ ಏ. 24 ರಂದು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ ಮುಚ್ಚಲಾಗಿದೆ. ಆದರೆ ಭಟ್ಕಳದ ಈ ಕುಟುಂಬ ತಾವು ಈ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ದ ಮಾಹಿತಿ ತಿಳಿಸಿರಲಿಲ್ಲ. ಇದಾದ 17 ದಿನಗಳ ನಂತರ ಈಗ ಸೋಂಕು ಪತ್ತೆಯಾಗಿದೆ. ಮೊದಲೇ ಮಾಹಿತಿ ಕೊಟ್ಟರೆ ಇಷ್ಟು ಪ್ರಕರಣ ಬರುವುದನ್ನು ತಪ್ಪಿಸಬಹುದಿತ್ತು ಎಂದರು.
ಸಾಂಸದರು ಈಗಾಗಲೇ ದ.ಕ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಮಾಹಿತಿ ಕಳಿಸಲಿ ಕೋರಿದ್ದರು. ಈಗ ಮಾಹಿತಿ ಬಂದಿದ್ದು, ಮೂರು ಕುಟುಬಗಳ ಗಂಟಲ ದ್ರವ ಪರೀಕ್ಷೆಗೆ ಕಳಿಸಲಾಗಿದೆ. ಜಿಲ್ಲೆಯಲ್ಲಿ ಇನ್ಯಾರಾದರೂ ಚಿಕಿತ್ಸೆ ಪಡೆದಿದ್ದರೆ ಮಾಹಿತಿ ಒದಗಿಸಬೇಕು ಎಂದರು.
ಭಟ್ಕಳದ ಸೀಲ್ ಡೌನ್ ಏರಿಯಾದಲ್ಲೇ ಈ ಎಲ್ಲ ಪ್ರಕರಣಗಳು ಬಂದಿರುವ ಹಿನ್ನಲೆಯಲ್ಲಿ ಜಿಲ್ಲೆಯ ಜನ ಆತಂಕ ಪಡುವ ಅಗತ್ಯವಿಲ್ಲ. ಇಂದಿನಿಂದ ಸೀಲ್ ಡೌನ್ ಪ್ರದೇಶದಲ್ಲಿ ಇನ್ನೂ ಕಠಿಣ ಕ್ರಮ ಜಾರಿ ಆಗಲಿದೆ. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಸಡಿಲಿಕೆ ಮುಂದುವರೆಯಲಿದೆ ಎಂದರು.