ಹೊಸದಿಗಂತ ವರದಿ, ಮಂಗಳೂರು:
ಕಾರು ಮಾರಾಟ ಆರೋಪ ಎದುರಿಸುತ್ತಿರುವ ನಗರ ಅಪರಾಧ ಪತ್ತೆದಳದ ಹಿಂದಿನ ಸಬ್ಇನ್ಸ್ಪೆಕ್ಟರ್ ಸೇರಿದಂತೆ ಮೂರು ಮಂದಿಗೆ ಶೀಘ್ರ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ವಿನಯ್ ಗಾಂವ್ಕರ್ ಶೀಘ್ರ ನೊಟೀಸ್ ಜಾರಿ ಮಾಡಲಿದ್ದಾರೆ.
ಮಧ್ಯಂತರ ವರದಿ ಈಗಾಗಲೇ ಸಲ್ಲಿಕೆಯಾಗಿದ್ದು, ಪೂರ್ಣ ಪ್ರಮಾಣದ ವರದಿ ಸಲ್ಲಿಕೆಗೆ ಮುನ್ನ ಕಳಂಕಿತರ ವಿಚಾರಣೆ ನಡೆಯಲಿದೆ. ಆ ವರದಿಯಲ್ಲಿ ಕಾರು ಮಾರಾಟದ ವಿವರ, ಮೊತ್ತ, ಸಾಕ್ಷ್ಯಧಾರ ಸಂಗ್ರಹ ಸಹಿತ ಇತರ ಮಾಹಿತಿಯನ್ನು ಒಳಗೊಂಡಿದೆ. ಸಂಪೂರ್ಣ ಮಾಹಿತಿ ಸಂಗ್ರಹವಾಗಿ10 ದಿನದೊಳಗೆ ವರದಿಯನ್ನು ನಗರ ಪೊಲೀಸ್ ಕಮಿಷನರ್ ಮೂಲಕ ಎಡಿಜಿಪಿಗೆ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕಾರು ಮಾರಾಟ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದು, ಗಂಭೀರವಾಗಿ ಪರಿಗಣಿಸಿದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರತಾಪ್ ರೆಡ್ಡಿ ಅವರು ಈ ಬಗ್ಗೆ ವರದಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಕಮಿಷನರ್ ಅವರು ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಅವರಿಗೆ ವರದಿ ನೀಡುವಂತೆ ಸೂಚನೆ ನೀಡಿದ್ದು, ಈಗಾಗಲೇ ಮಧ್ಯಂತರ ವರದಿ ಎಡಿಜಿಪಿಗೆ ಸಲ್ಲಿಕೆಯಾಗಿದೆ. ಈ ವರದಿಯಲ್ಲಿ ‘ಕಾರು ಮಾರಾಟ ಪ್ರಕರಣ ವರದಿಯಲ್ಲಿ ಸತ್ಯಾಂಶವಿದೆ’ ಎಂದು ಉಲ್ಲೇಖವಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.