Sunday, August 14, 2022

Latest Posts

ಕಾರ್ಖಾನೆಯಿಂದ ನದಿಗೆ ಕಲುಷಿತ ನೀರು, ತ್ಯಾಜ್ಯ ಬರದಂತೆ ತಡೆಯಬೇಕು : ಅನಂತ ಹೆಗಡೆ ಅಶೀಸರ

ಹಾವೇರಿ: ಕಾರ್ಖಾನೆಯಿಂದ ನದಿಗೆ ಕಲುಷಿತ ನೀರು ಹಾಗೂ ತ್ಯಾಜ್ಯ ಹರಿದು ಮಲೀನವಾಗದಂತೆ ತಡೆಯಬೇಕು ಹಾಗೂ ಕಾರ್ಖಾನೆಯ ಸುತ್ತಲಿನ ಗ್ರಾಮಗಳಿಗೆ ವಾಯುಮಾಲಿನ್ಯದಿಂದ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಹಾಗೂ ಭೂ ಕುಸಿತ ಅಧ್ಯಯನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಮಂಗಳವಾರ ಜಿ.ಪಂ ಸಭಾಂಗಣದಲ್ಲಿ ಜಿಲ್ಲೆಯ ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ರಚಿಸಲಾಗಿರುವ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಕಾರ್ಯ ಚಟುವಟಿಕೆ, ಪರಿಸರ ರಕ್ಷಣೆ ಹಾಗೂ ಭೂ ಕುಸಿತ ಕುರಿತಂತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಸೂಚಿಸಿರುವ ನಿಯಮಗಳ ಪಾಲನೆಗೆ ಕಾರ್ಖಾನೆಗಳಿಗೆ ತಾಕೀತು ಮಾಡಬೇಕು ಎಂದರು.
ಪರಿಸರ ಅಧಿಕಾರಿಗಳು ನಿಯಮಿತವಾಗಿ ಕಾರ್ಖಾನೆಗಳಿಗೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ನಡೆಸಬೇಕು. ಕಾರ್ಖಾನೆಗಳ ವಿವರಣೆ ಕೇಳಿ ಬರಬಾರದು. ಕಾರ್ಖಾನೆಗಳ ತ್ಯಾಜ್ಯದಿಂದ ಜನ, ಜಾನುವಾರು, ಪಕ್ಷಿ ಸಂಕುಲ ರಕ್ಷಣೆಯ ಕಾಳಜಿ ಇರಲಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೋಟಗಾರಿಕೆ ಇಲಾಖೆಯಿಂದ ಜೇನು ಕೃಷಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ರೈತರಿಗೆ ತರಬೇತಿ ನೀಡಬೇಕು. ಯೋಜನೆಯನ್ನು ರೂಪಿಸಬೇಕು. ಹಳ್ಳಿಗಳನ್ನು ಆಯ್ಕೆಮಾಡಿ ಜೇನು ಕೃಷಿಗೆ ಕ್ಲಸ್ಟರ್‌ಗಳನ್ನಾಗಿ ರೂಪಿಸಬೇಕು. ರೈತರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಹಾಟ್‌ಸ್ಪಾಟ್
ವೈವಿಧ್ಯಮಯ ಸಸ್ಯ ಹಾಗೂ ಜೀವ ಸಂಕುಲಗಳ ಬೆಳವಣಿಗೆ ಹಾಗೂ ಜಲ ರಕ್ಷಣೆಗೆ ಪೂರಕವಾದ ತಾಣಗಳನ್ನು ಗುರುತಿಸಿ ಇವುಗಳನ್ನು ಜೀವ ವೈವಿಧ್ಯಮಯ ಹಾಟ್‌ಸ್ಪಾಟ್‌ಗಳಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸ್ಥಳಗಳನ್ನು ಗುರುತಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸಮಿತಿ ರಚನೆಯ ಪ್ರಗತಿ ಹಾಗೂ ಕಾರ್ಯಗಳ ಕುರಿತಂತೆ ಜಿ.ಪಂ ಸಿಇಓ ರಮೇಶ ದೇಸಾಯಿ ಸಭೆಗೆ ಮಾಹಿತಿ ನೀಡಿದರು.
ಜನತಾ ಜೀವ ವೈವಿಧ್ಯ ದಾಖಲಾತಿ ಕಾರ್ಯಗಳನ್ನು ಅತ್ಯಂತ ಗುಣಮಟ್ಟವಾಗಿ ನಿರ್ವಹಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಪಶು, ಪಕ್ಷಿ, ಜೀವಸಂಕುಲಗಳು, ಪರಿಸರ ಪ್ರಬೇಧಗಳ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಬೇಕು. ಸಭೆಗಳನ್ನು ನಡೆಸಬೇಕು. ಜನರೊಂದಿಗೆ ಸಮಾಲೋಚನೆ ನಡೆಸಬೇಕು. ಜೈವಿಕ ಸಂಪನ್ಮೂಲಗಳು ಹಾಗೂ ಸಂಬಂಧಿಸಿದ ಜ್ಞಾನಪರಂಪರೆಯನ್ನು ಕ್ಷೇತ್ರಭೇಟಿ ನೀಡಿ ಜನರೊಂದಿಗೆ ಸಮಾಲೋಚನೆ ನಡೆಸಿ ಗುಣಮಟ್ಟದ ಮಾಹಿತಿಯನ್ನು ದಾಖಲಿಸಬೇಕು. ಇದಕ್ಕೆ ಬೇಕಾದ ತಾಂತ್ರಿಕ ಮಾರ್ಗದರ್ಶನ ಹಾಗೂ ಬೆಂಬಲವನ್ನು ಪ್ರಾಧಿಕಾರ ನೀಡುತ್ತದೆ ಎಂದು ಸೂಚಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss