Friday, August 19, 2022

Latest Posts

ಕಾರ್ಯವಿಧಾನದ ಸೂಚಿ ಉಲ್ಲಂಘಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ

ಹೊಸ ದಿಗಂತ ವರದಿ ಉಡುಪಿ:

ಸರಕಾರ ಮದುವೆಯಂಥ ಸಮಾರಂಭಗಳಲ್ಲಿ 200 ಜನರ ಪಾಲ್ಗೊಳ್ಳುವಿಕೆಗೆ ಮಿತಿಗೊಳಿಸಿ, ಕಾರ್ಯವಿಧಾನದ ಸೂಚಿ(ಎಸ್.ಒ.ಪಿ.)ಯನ್ನು ನೀಡಿದ್ದು, ಇದನ್ನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ನೀಡಿದ್ದಾರೆ.
ಪ್ರಸ್ತುತ ಎಲ್ಲೆಡೆ ಮದುವೆ, ಮೆಹಂದಿ ಸಮಾರಂಭಗಳ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸರಕಾರ 200 ಜನರನ್ನು ಸೇರಿಸಿ ಮದುವೆ ಸಮಾರಂಭ ನಡೆಸಲು ಅನುಮತಿ ಕೊಟ್ಟಿದೆ. ಎಲ್ಲ ತಹಶೀಲ್ದಾರರು ಕೂಡ ಅನುಮತಿ ಕೊಡುತ್ತಿದ್ದಾರೆ. ಆದರೆ ಮದುವೆ ಸಮಾರಂಭಗಳಲ್ಲಿ 200ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವುದನ್ನು ನೋಡುತ್ತಿದ್ದೇವೆ. ಮಾಧ್ಯಮಗಳಲ್ಲಿಯೂ ವರದಿಯಾಗುತ್ತಿದೆ. ಯಾರು ಸರಕಾರದ ಮಾರ್ಗಸೂಚಿಯನ್ನು ಮೀರುತ್ತಾರೆ, ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ.
ತಹಶೀಲ್ದಾರ್ ಕಾರ್ಯಕ್ರಮಗಳಿಗೆ ಅನುಮತಿ ನೀಡುವಾಗ, ಅನುಮತಿ ಪಡೆದುಕೊಂಡವರ ನಿಗಾ ವಹಿಸಲು ಒಬ್ಬ ಅಧಿಕಾರಿಯನ್ನು ನೇಮಿಸಲು ಸೂಚನೆ ಕೊಡಲಾಗಿದೆ. ಯಾವ ಅಧಿಕಾರಿ ನಿಯೋಜನೆಗೊಂಡಿರುತ್ತಾರೋ ಅವರು ಸರಿಯಾಗಿ ಕರ್ತವ್ಯ ನಿರ್ಹಿಹಿಸದಿದ್ದರೆ, ಆ ಅಧಿಕಾರಿಯ ಮೇಲೂ ಕ್ರಮಕೈಗೊಳ್ಳುತ್ತೇವೆ. ಸರಕಾರದ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಲೀಕರು ಮಾಸ್ಕ್ ಹಾಕದಿದ್ದರೆ ಲೈಸನ್ಸ್ ಕ್ಯಾನ್ಸಲ್
ಅಂಗಡಿ ಮಂಗಟ್ಟುಗಳಲ್ಲಿ ಹೆಚ್ಚು ಜನರು ಸೇರಬಾರದು ಅಂದರೂ ಅದನ್ನೂ ಉಲ್ಲಂಘಿಸುತ್ತಿದ್ದಾರೆ. ಅಂಗಡಿ ಮಾಲೀಕರೂ ಸರಿಯಾಗಿ ಮಾಸ್ಕ್ ಧರಿಸದಿರುವುದನ್ನೂ ನೋಡುತ್ತಿದ್ದೇವೆ. ಅಂಥವರ ಅಂಗಡಿ ಲೈಸನ್ಸ್ ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಕ್ರಮಕೈಗೊಳ್ಳುತ್ತೇವೆ ಎಂದು ಜಿ. ಜಗದೀಶ ಅವರು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗತ ಅಂತರ ಕಾಪಾಡುತ್ತಿಲ್ಲ, ಕಡ್ಡಾಯ ಮಾಸ್ಕ್ ಹಾಕದವರಿಗೆ ದಂಡ ವಿಧಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ದಂಡ ಹಾಕುವುದು ಅಥವಾ ಕಟ್ಟುವುದು ದೊಡ್ಡ ವಿಚಾರವಲ್ಲ, ಬೇರೆಯವರ ಆರೋಗ್ಯದಲ್ಲಿ ಯಾರೂ ಆಟ ಆಡಬಾರದು ಎಂದು ಜಿಲ್ಲಾಧಿಕಾರಿ ಜಗದೀಶ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!