Thursday, July 7, 2022

Latest Posts

ಕಾಲುಗಳಿಗೆ ಸರಪಳಿ ಬಿಗಿದು ಒಂದು ಕಿಲೋ ಮೀಟರ್ ಪದ್ಮಾಸನ ಭಂಗಿಯಲ್ಲಿ ಈಜಿದ ನಾಗರಾಜ ಖಾರ್ವಿ!

ಹೊಸ ದಿಗಂತ ವರದಿ, ಮಂಗಳೂರು:

ಕುಂದಾಪುರ ಕಂಚುಗೋಡಿನ ನಾಗರಾಜ ಖಾರ್ವಿ ಶನಿವಾರ ಪೂರ್ವಾಹ್ನ 9 ಗಂಟೆಯ ಸುಮಾರಿಗೆ ತಣ್ಣೀರುಬಾವಿ ಬಳಿ ಅರಬ್ಬಿ ಸಮುದ್ರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗಾಗಿ ಕಾಲುಗಳಿಗೆ ಸರಪಳಿ ಬಿಗಿದು ಪದ್ಮಾಸನ ಭಂಗಿಯಲ್ಲಿ ಯಶಸ್ವಿಯಾಗಿ ಒಂದು ಕಿಲೋ ಮೀಟರ್ ಈಜಿದರು. ಪದ್ಮಾಸನ ಭಂಗಿಯಲ್ಲಿ ಸಮುದ್ರದಲ್ಲಿ ಬ್ರೆಸ್ಟ್‌ಸ್ರೋಕ್ ಈಜುವುದಾಗಿ ಖಾರ್ವಿಯವರು ಡಿ.16ರಂದು ಪ್ರಕಟಿಸಿದ್ದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಡಿಡಿಪಿಐ) ಮಲ್ಲೇಸ್ವಾಮಿ ಉಪಸ್ಥಿತರಿದ್ದರು. ನಾಗರಾಜ ಖಾರ್ವಿಯವರ ಈಜು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಯಿತು.
ಸುಮಾರು 25 ನಿಮಿಷ ಈಜಿ ನಿಗದಿತ ಗುರಿಯನ್ನು ಯಶಸ್ವಿಯಾಗಿ ತಲುಪಿದ ಖಾರ್ವಿಯವರನ್ನು ಬೆಂಗಾವಲಿಗೆ ತೆರಳಿದ್ದ ಸರ್ಫಿಂಗ್ ತಂಡ ತಮ್ಮ ದೋಣಿಯಲ್ಲಿ ಕುಳ್ಳಿರಿಸಿ ತಂಡಕ್ಕೆ ತಂದಿತು. ಬಳಿಕ ಅಧಿಕಾರಿಗಳ ಸಮಕ್ಷಮದಲ್ಲಿ ಕಾಲುಗಳಿಗೆ ಬಿಗಿದ ಸರಪಳಿಯನ್ನು ಬಿಡಿಸಲಾಯಿತು.
ಉಪಸ್ಥಿತರಿದ್ದ ಬಂಧುಗಳು,ಕ್ರೀಡಾ ಪ್ರೇಮಿಗಳು, ಅಧಿಕಾರಗಳು ಮತ್ತು ಖಾರ್ವಿಯವರ ಈಜು ತರಬೇತಿದಾರರು ಅಭಿನಂದಿಸಿದರು. ಈಜು ಸಾಧಕ ಗೋಪಾಲ ಖಾರ್ವಿ ಉಪಸ್ಥಿತರಿದ್ದರು. ತರಬೇತಿದಾರರು ಮತ್ತು ಕರಾವಳಿ ತಟ ರಕ್ಷಣಾ ಪಡೆಯ ಸಿಬ್ಬಂದಿ ಎರಡು ದೋಣಿಗಳಲ್ಲಿ ಖಾರ್ವಿಯವರಿಗೆ ಬೆಂಗಾವಲು ನೀಡಿದರು.
ನಾಗರಾಜ ಖಾರ್ವಿ ಕಳೆದ ಜನವರಿಯಲ್ಲಿ ಗುಜರಾತಿನ ವಡೋದರದಲ್ಲಿ ನಡೆದ ರಾಷ್ಟ್ರ ಮಟ್ಟದ ಮಾಸ್ಟರ್‍ಸ್ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಮತ್ತು ಒಂದು ಕಂಚಿನ ಪದಕ ಗಳಿಸಿದ್ದರು. ಅಷ್ಟಕ್ಕೆ ತೃಪ್ತರಾಗದ ಖಾರ್ವಿ ಈಜಿನಲ್ಲಿ ರಾಷ್ಟ್ರೀಯ ಮತ್ತು ಲಿಮ್ಕಾ ದಾಖಲೆಗೆ ಮುಂದಾದರು.
ಈಜು ಗುರುಗಳಾದ ಬಿ.ಕೆ.ನಾಯ್ಕ್‌ರ ಮಾರ್ಗದರ್ಶನದಲ್ಲಿ ಸತತ ತರಬೇತಿ ಪಡೆದು ಶುಕ್ರವಾರ ರಾಷ್ಟ್ರೀಯ ದಾಖಲೆಗಾಗಿ ಸಮುದ್ರದಲ್ಲಿ ಈಜಿ ಯಶಸ್ವಿಯಾಗಿ ನಿಗದಿತ ಗುರಿ ತಲುಪಿದರು.
ನಾರಗಾಜ ಖಾರ್ವಿ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಕಲ್ಮಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪದವೀಧರ ಶಿಕ್ಷಕರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss