ಹೊಸ ದಿಗಂತ ವರದಿ ಮೈಸೂರು:
ಕಾಲ ಚಕ್ರ ಉರುಳಿದಂತೆ ಜೆಡಿಎಸ್ನ ರಾಜಕೀಯ ಬದಲಾವಣೆ ಆಗುತ್ತೆ! ಎಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಮಾರ್ಮಿಕವಾಗಿ ಹೇಳಿದರು.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ಡಿಎ ಜೊತೆ ಜೆಡಿಎಸ್ ಕೈ ಜೋಡಿಸುವ ವಿಚಾರವನ್ನು ನಾನು ಕೂಡ ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ, ಆದರೆ ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಕಾಲ ಚಕ್ರ ಉರುಳಿದಂತೆ ರಾಜಕೀಯ ಬದಲಾವಣೆ ಆಗುತ್ತೆ. ಈ
ಹಿಂದೆ ಧರಮ್ ಸಿಂಗ್ ಸಿಎಂ, ಸಿದ್ದರಾಮಯ್ಯ ಡಿಸಿಎಂ ಆಗಿದ್ದರು, ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆದಾಗ ಯಡಿಯೂರಪ್ಪ ಡಿಸಿಎಂ ಆಗಿದ್ದರು. ಮತ್ತೆ 2018 ರಲ್ಲಿ ಕುಮಾರಸ್ವಾಮಿ ಸಿಎಂ ಆದಾಗ, ಡಾ.ಜಿ.ಪರಮೇಶ್ವರ್ ಡಿಸಿಎಂ ಆಗಿದ್ದರು..ಹೀಗೆ ಕಾಲ ಚಕ್ರ ಉರುಳುತ್ತಾ ಇರುತ್ತೆ. ಆ ಟೈಂಗೆ ಏನಾಗಬೇಕು ಅದು ಆಗುತ್ತೆ. ಕಾಲಕ್ಕೆ ತಕ್ಕಂತೆ ಜೆಡಿಎಸ್ ಬದಲಾವಣೆ ಎಂದು ಪರೋಕ್ಷವಾಗಿ ಟೀಕಿಸಿದರು.
ಜನವರಿ 7 ಕ್ಕೆ ಜೆಡಿಎಸ್ ನಿಷ್ಠಾವಂತರ ಸಭೆ ಇದೆ ಎಂದು ಗೊತ್ತಾಗಿದೆ. ಆದರೆ, ಸಭೆಗೆ ಬನ್ನಿ ಅಂತ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಫ್ರೀ ಇದ್ರೆ ಹೋಗ್ತೀನಿ, ಮೊದಲು ನನಗೆ ಕ್ಷೇತ್ರದ ಕೆಲಸ ಕಾರ್ಯ ಮುಖ್ಯ, ಬಳಿಕ ಪಕ್ಷ. ಬಿಡುವಿದ್ದರೆ ಅಂದಿನ ಸಭೆಗೆ ಹೋಗ್ತೀನಿ ಎಂದು ಹೇಳಿದರು.
2021 ಹೊಸ ವರ್ಷದಲ್ಲಿ ನನ್ನ ರಾಜಕೀಯ ಜೀವನದಲ್ಲಿ ಏನು ಬದಲಾವಣೆ ಇಲ್ಲ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. 2023ಕ್ಕೆ ಬದಲಾವಣೆ ಆಗಬಹುದು ಎಂದರು.
ಮೈಸೂರು ಮಹಾನಗರಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಕುರಿತು ಪ್ರತಿಕ್ರಿಯಿಸಿದ ಜಿಟಿಡಿ, ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ನನ್ನ ಕೇಳಲಿಲ್ಲ. ಈಗ ನಾನು ಉಸ್ತುವಾರಿ ಸಚಿವನಲ್ಲ ಈಗ ನನ್ನ ಕೇಳ್ತಾರ. ಕೆಲ ಕಾರ್ಪೋರೇಟರ್ಗಳು ನನ್ನತ್ರ ಬಂದು ಡಿಸ್ಕಸ್ ಮಾಡಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಹೋಗಿ ಎಂದು ಹೇಳಿದ್ದೇನೆ. ನನ್ನ ಜೊತೆ ಇರುವ ಕಾರ್ಪೋರೇಟರ್ಗಳಿಗೆ ಹಿಂದೆ ನನ್ನನ್ನ ಹೇಳಿ ಕೇಳಿ ನಿರ್ಧಾರ ಮಾಡಿಲ್ಲ. ಆದರೂ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.