ಹೊಸ ದಿಗಂತ ವರದಿ, ಪುತ್ತೂರು:
ಕಾವು ಅಮ್ಚಿನಡ್ಕ ಸಮೀಪ ಕಾಡುತ್ಪತ್ತಿ ಸಂಗ್ರಹದ ಕೆಲಸ ಮಾಡುವ ಕೂಲಿ ಕಾರ್ಮಿಕರೊಬ್ಬರು ರಾತ್ರಿ ನಾಪತ್ತೆಯಾಗಿ, ಬೆಳಿಗ್ಗೆ ಮುಖ ಜಜ್ಜಿದ ರೀತಿಯಲ್ಲಿ ಹೆಣವಾಗಿ ಪತ್ತೆಯಾದ ಘಟನೆ ಸಂಪ್ಯ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ನೆಲ್ಯಾಡಿ ಪಟ್ಲಡ್ಕ ನಿವಾಸಿ ಪೊಡಿಯ ಎಂಬವರು ಮೃತಪಟ್ಟ ವ್ಯಕ್ತಿ.
ಅಮ್ಚಿನಡ್ಕ ಸಮೀಪ ಕಾಡುತ್ಪತ್ತಿ ಸಂಗ್ರಹ ಕೆಲಸಕ್ಕೆ ನಾಲ್ಕು ಜನರ ತಂಡದೊಂದಿಗೆ ಆಗಮಿಸಿದ ಪೊಡಿಯ, ಅಲ್ಲೇ ಬಾಡಿಗೆ ರೂಮಿನಲ್ಲಿ ವಾಸ್ತವ್ಯ ಹೂಡಿದ್ದರು. ನ.21ರಬೆಳಿಗ್ಗೆ ರೂಮಿನಿಂದ ನಾಪತ್ತೆಯಾಗಿದ್ದರು.
ವಿಷಯ ಗೊತ್ತಾಗಿ ಪೊಡಿಯ ಅವರ ಮನೆಯವರು ಬಂದು ಹುಡುಕಾಡಿದಾಗ ರೂಮಿನಿಂದ ಸ್ವಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.
ಇದೀಗ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಮ್ಮೊಮ್ಮೆ ಪೊಡಿಯ ಅವರು ವಿಚಿತ್ರವಾಗಿ ನಡೆದುಕೊಳ್ಳುವ , ಅವೇಶಗೊಂಡವರಂತೆ ರಾತ್ರಿ ಓಡುವ ಅಭ್ಯಾಸವಿದೆ ಎಂದು ಮನೆಯವರು ತಿಳಿಸಿದ್ದಾರೆ.
ನ.20ರ ರಾತ್ರಿ ಅದೇ ರೀತಿ ಓಡುವಾಗ ಬಿದ್ದು ಮುಖ ಜಜ್ಜಿದಾಗೆ ಆಗಿರಬಹುದು. ಇದು ಕೊಲೆಯಲ್ಲ. ಇದು ಆಕಸ್ಮಿಕ ಸಾವು. ಪೊಡಿಯ ಅವರ ಅಣ್ಣ ದೂರು ನೀಡಿದ್ದಾರೆ ಎಂದು ಸಂಪ್ಯ ಠಾಣಾ ಎಸ್ಐ ಉದಯರವಿ ತಿಳಿಸಿದ್ದಾರೆ .