Wednesday, August 10, 2022

Latest Posts

ಕಾಶ್ಮೀರದ ಕಳೆ ಇನ್ನಷ್ಟು ಹೆಚ್ಚಿಸಲಿದೆ ಶ್ರೀ ರಾಮಾನುಜಾಚಾರ್ಯರ ಪುತ್ಥಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಶ್ರೀ ಯದುಗಿರಿ ಯತಿರಾಜ ಮಠದ ವತಿಯಿಂದ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಅಮೃತಶಿಲೆಯಿಂದ ನಿರ್ಮಿಸಲಾದ ಶ್ರೀ ರಾಮಾನುಜಾಚಾರ್ಯರ ಶಾಂತಿ ಪ್ರತಿಮೆಯನ್ನು ಕೇಂದ್ರ ಗೃಹಸಚಿವ ಅಮಿತ್‌ ಶಾ ವರ್ಚುವಲ್‌ ಆಗಿ ಅನಾವರಣಗೊಳಿಸಿದರು.
“ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕ ಶ್ರೀ ರಾಮಾನುಜರು ಸಮ ಸಮಾಜದ ನಿರ್ಮಾಣಕ್ಕಾಗಿ ಹಂಬಲಿಸಿದ ಮಹಾನ್ ವ್ಯಕ್ತಿತ್ವ ಎಂದು ಅವರು ಈ ವೇಳೆ ಬಣ್ಣಿಸಿದರು.
ಉದಾರವಾದಿ ಧೋರಣೆಯನ್ನು ಹೊಂದಿದ್ದ ರಾಮಾನುಜರು ಸಮಾಜದಲ್ಲಿನ ಅಸಮಾನತೆಗಳ ವಿರುದ್ಧ ಬಲವಾಗಿ ನಿಂತರು. ಅವರ ಉಪದೇಶ ಮತ್ತು ಆಚರಣೆಗಳು ಸಾವಿರ ವರ್ಷಗಳ ನಂತರವೂ ಪ್ರಸ್ತುತವಾಗಿವೆ. ಅವರು ದೇಶದ ಸಮಗ್ರತೆಗೆ ಅಪಾರ ಕೊಡುಗೆ ನೀಡಿದ್ದಾರೆ ಮತ್ತು ಸ್ಥಾಪಿಸಲಾದ ಅವರ ಪ್ರತಿಮೆಯು ಕಾಶ್ಮೀರಕ್ಕೆ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕೆ ಶಾಂತಿಯ ಸಂದೇಶವನ್ನು ಕಳುಹಿಸುತ್ತದೆ ಎಂದು ಅವರು ಹೇಳಿದರು. ಮುಂದಿನ ವರ್ಷ ಗುಜರಾತ್‌ನಲ್ಲಿ ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಅವರು ಇದೇವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಕರ್ನಾಟಕದಲ್ಲಿ 40 ವರ್ಷಗಳ ಕಾಲ ತಂಗಿದ್ದ ಶ್ರೀ ರಾಮಾನುಜಾಚಾರ್ಯರು ತಮ್ಮ ಮಹಾನ್ ಕೃತಿ ʼಶ್ರೀ ಭಾಷಾʼ ರಚನೆಯ ಸಮಯದಲ್ಲಿ ಕಾಶ್ಮೀರಕ್ಕೆ ಎರಡು ಬಾರಿ ಭೇಟಿ ನೀಡಿದ್ದರು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಯದುಗಿರಿ ಯತಿರಾಜ ನಾರಾಯಣ ಜೀರ್ ಅವರು ತಮ್ಮ ಆಶೀರ್ವಚನದಲ್ಲಿ ರಾಮಾನುಜರ ಉಪದೇಶದ ಪ್ರಸ್ತುತತೆಯನ್ನು ವಿವರಿಸಿದರು.
ಕಳೆದ ಫೆಬ್ರವರಿಯಲ್ಲಿ ಹೈದರಾಬಾದ್ ಬಳಿ 216 ಅಡಿ ಎತ್ತರದ ಶ್ರೀ ರಾಮಾನುಜರ ಪ್ರತಿಮೆಯನ್ನು (ಸಮಾನತೆಯ ಪ್ರತಿಮೆ) ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಜೆ-ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss