Friday, August 12, 2022

Latest Posts

ಕಾಸರಗೋಡಿಗರೇ, ನಿಮ್ಮೂರ ವೃದ್ಧ ದಿಕ್ಕುತೋಚದೆ ಕಂಗಾಲಾಗಿದ್ದಾರೆ… ನೆರವಾಗುವಿರಾ?

ಉಡುಪಿ: ಕೊರೋನಾ ಏನೆಲ್ಲ ಸಂದಿಗ್ಧತೆಯನ್ನು ಸೃಷ್ಟಿಸಿದೆ ಎಂದರೆ, ಜೀವನ ದಶಕಗಳ ಕಾಲ ಹಿಂದಕ್ಕೆ ಹೋಗಿದೆ! ಹಲವರನ್ನು ಹತ್ತಿರ ಸೇರಿಸಿದರೆ, ಇನ್ನೂ ಕೆಲವರನ್ನು ದೂರ ಸರಿಸಿದೆ. ಇಲ್ಲೊಂದು ಕರುಣಾಜನಕ ವರದಿ ಇದೆ, ಇಲ್ಲೀಗ ಗಡಿಯಾಚೆಗೂ ಮತ, ಪಂಥ, ಧರ್ಮದಾಜೆಗೂ ಮಾನವೀಯ ಹೃದಯ ಮಿಡಿಯಬೇಕಿದೆ. ಇಳಿ ವಯಸ್ಸಿನಲ್ಲಿರುವ ಈ ವ್ಯಕ್ತಿಯನ್ನು ಅವರ ಊರು ಸೇರಿಸಬೇಕಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸಂಬಂಧಿತ ದಿಗ್ಬಂಧನ ಕೇಂದ್ರದಲ್ಲಿ ಒಬ್ಬ ವೃದ್ಧರಿದ್ದಾರೆ. ಅವರ ದಿಗ್ಬಂಧನ ಅವಧಿ ಮುಗಿದಿದೆ. ಆದರೂ ಅವರು ಇನ್ನೂ ಅಲ್ಲೇ ಇದ್ದಾರೆ. ಕಾರಣ ಅವರಿಗೆ ವಾರೀಸುದಾರರೇ ಇಲ್ಲ! ಇದೀಗ ಆ ವ್ಯಕ್ತಿಯನ್ನು ಎಲ್ಲಿಗೆ ಕಳುಹಿಸಬೇಕು ಎಂಬುದೇ ಗೊತ್ತಾಗದೇ ಜಿಲ್ಲಾಡಳಿತ ಕಂಗಾಲಾಗಿದೆ.

ತಾನು ಕಾಸರಗೋಡಿನ ಕಳ್ನಾಡು ನಿವಾಸಿ ಎನ್ನುವ ಈ ವ್ಯಕ್ತಿಯ ಹೆಸರು ಅಶ್ರಫ್, 68ವರ್ಷ ಪ್ರಾಯ ಎಂದು ಹೇಳುವ ಅವರು, ತನಗೆ ಮೂವರು ಮಕ್ಕಳು ಎಂದು ಹೇಳುತ್ತಾರೆ. ಮಲಯಾಳಂ ಹೊರತು ಬೇರೆ ಭಾಷೆ ಮಾತನಾಡುತ್ತಿಲ್ಲ. ಕಳೆದ ಒಂದು ತಿಂಗಳಿಂದ ಬನ್ನಂಜೆಯ ಸರಕಾರಿ ದಿಗ್ಬಂಧನ ಕೇಂದ್ರದಲ್ಲಿದ್ದಾರೆ.

ಉಡುಪಿ ಜಿಲ್ಲಾಡಳಿತವು ಕಾಸರಗೋಡು ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿದೆ. ಸಂತ್ರಸ್ತ ಅಶ್ರಫ್ ನೀಡಿದ ಮಾಹಿತಿಯನ್ನು ಆಧರಿಸಿ ಕಾಸರಗೋಡು ಪೊಲೀಸರು ವಾರಸುದಾರರನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿದ್ದಾರೆ. ಅಶ್ರಫ್ ಮರೆವಿನ ಕಾಯಿಲೆ ಇದ್ದಂತೆ ಭಾಸವಾಗುತ್ತಿದ್ದಾರೆ. ಕಾಸರಗೋಡಿನಲ್ಲಿ ತಾನೊಂದು ಹೊಟೇಲಿನಲ್ಲಿ ಕೆಲಸಕ್ಕಿದ್ದೆ ಎಂದು ವಿಳಾಸವನ್ನು ನೀಡಿದ್ದು, ಅದನ್ನು ಅಲ್ಲಿನ ಪೊಲೀಸರು ಪತ್ತೆ ಹಚ್ಚಿದಾಗ 25 ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದದ್ದು ಗೊತ್ತಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಅಶ್ರಫ್ ಕೆಲಸ ಮಾಡಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಅಶ್ರಫ್ ಕೆಲಸ ಮಾಡುತ್ತಿದ್ದಾಗ ಅಲ್ಲಿದ್ದ ಮಾಲೀಕರು ಕೂಡ ಈಗಿಲ್ಲ.

ಪತ್ನಿಯ ಹೆಸರು ಕೆಲವೊಮ್ಮೆ ಹೇಳುತ್ತಾರೆ, ಆದರೆ ಹೆಚ್ಚಿನ ಮಾಹಿತಿಯನ್ನು ನೀಡಲು ಕಷ್ಟಪಡುತ್ತಿದ್ದಾರೆ. ಮಕ್ಕಳಲ್ಲಿ ಒಬ್ಬ ಮಗ ಆಟೋ ಡ್ರೈವರ್, ಇನ್ನೊಬ್ಬ ಮೇಸ್ತ್ರಿ ಹಾಗೂ ಮತ್ತೊಬ್ಬಳು ಮಗಳು ಎನ್ನುತ್ತಾರೆ. ಆದರೆ ಮಕ್ಕಳೀಗ ಎಲ್ಲಿದ್ದಾರೆ, ಮಕ್ಕಳಿಗೆ ಮದುವೆಯಾಗಿದೆಯೇ ಎಂಬುದು ಅವರಿಗೆ ನೆನಪಾಗುತ್ತಿಲ್ಲ. ನಾಲ್ಕು ತಿಂಗಳ ಹಿಂದೆ ಗಂಗೊಳ್ಳಿಯಲ್ಲಿ ಬಲೆ ರಿಪೇರಿ ಕೆಲಸ ಮಾಡುತ್ತಿದ್ದೆ ಎನ್ನುತ್ತಿದ್ದಾರೆ. ಹೆಚ್ಚು ಪ್ರಶ್ನೆಗಳನ್ನು ಕೇಳಿದರೆ ಮೌನವಾಗುತ್ತಾರೆ.

ವಿಳಾಸ ಮತ್ತು ವಾರೀಸುದಾರರನ್ನು ಪತ್ತೆ ಹಚ್ಚುತ್ತಿರುವ ಕಾಸರಗೋಡು ಪೊಲೀಸರು ನೇರವಾಗಿ ಅಶ್ರಫ್ ಜೊತೆ ಮಾತನಾಡಿದ್ದಾರೆ. ಉಡುಪಿ ಜಿಲ್ಲೆಯಿಂದ ನಿರ್ಮಿತಿ ಕೇಂದ್ರದ ಅರುಣ್ ಕುಮಾರ್ (9448287341) ಕಾಸರಗೋಡು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ. ಒಂದೆರಡು ದಿನಗಳಲ್ಲಿ ವಿಳಾಸ ಪತ್ತೆ ಹಚ್ಚುವ ವಿಶ್ವಾಸವನ್ನು ಕಾಸರಗೋಡು ಪೊಲೀಸರು ವ್ಯಕ್ತಪಡಿಸಿದ್ದಾರೆ ಎಂದು ಅರುಣ್ ಕುಮಾರ್ ‘ಹೊಸದಿಗಂತ’ಕ್ಕೆ ಮಾಹಿತಿ ನೀಡಿದ್ದಾರೆ.

ಈ ನಡುವೆ ಉಡುಪಿ ಜಿಲ್ಲೆಯ ಹಿಂದು ಸಂಘಟನೆಗಳು ಕೂಡ ಅಶ್ರಫ್ ಅವರನ್ನು ಅವರ ಊರಿಗೆ ತಲುಪಿಸಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಅವರಿಗೆ ನಿತ್ಯ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಇದೀಗ ಕಾಸರಗೋಡು ಜಿಲ್ಲೆಯ ನಾಗರಿಕರು ಕೂಡ ತಮ್ಮೂರಿನ ವ್ಯಕ್ತಿಯ ನೆರವಿಗೆ ಧಾವಿಸಬೇಕಾದ ಅನಿವಾರ್ಯ ಉಂಟಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss