Monday, July 4, 2022

Latest Posts

ಕಾಸರಗೋಡಿನಲ್ಲಿ ಕೊರೋನಾ ಕೋರ್ ಸಮಿತಿ ಸಭೆ: ಕೋವಿಡ್ ತಪಾಸಣೆ ಹೆಚ್ಚಳಕ್ಕೆ ನಿರ್ಧಾರ

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ದಿನವೊಂದಕ್ಕೆ ಒಂದು ವಾರ್ಡ್ ನಲ್ಲಿ ಕುಟುಂಬವೊಂದರ
ಸದಸ್ಯರ ತಪಾಸಣೆ ನಡೆಸಬೇಕು ಎಂದು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯು ತೀರ್ಮಾನಿಸಿದೆ.
ವೀಡಿಯೋ ಕಾನ್ಪರೆನ್ಸ್ ಮೂಲಕ ಬುಧವಾರ ಜರಗಿದ ಕೋರ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಸತತವಾಗಿ 14 ದಿನಗಳ ಕಾಲ ಅತ್ಯಧಿಕ ಪ್ರಮಾಣದಲ್ಲಿ ಕುಟುಂಬಗಳ ಸದಸ್ಯರನ್ನು ತಪಾಸಣೆಗೆ ಹಾಜರುಪಡಿಸುವ ಗ್ರಾ.ಪಂ.ಗಳಿಗೆ ಬಹುಮಾನ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ತಿಂಗಳಿಗೊಮ್ಮೆ ಶಿಕ್ಷಕರು, ವಿದ್ಯಾರ್ಥಿಗಳು ಕೋವಿಡ್ ತಪಾಸಣೆಗೆ ಒಳಗಾಗಬೇಕು. ಸರಕಾರಿ ಕಚೇರಿಗಳ ಸಿಬ್ಬಂದಿಗಳು ಕೋವಿಡ್ ತಪಾಸಣೆ ಚಾಲೆಂಜ್ ವಹಿಸಿಕೊಳ್ಳಬೇಕು. ಎಲ್ಲ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್ ತಪಾಸಣೆಗೊಳಗಾಗಿ ನೆಗೆಟಿವ್ ಸರ್ಟಿಫಿಕೇಟ್ ಇರಿಸಿಕೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಕಾಸರಗೋಡು, ಕಾಞಂಗಾಡು, ನೀಲೇಶ್ವರ ನಗರಸಭೆಗಳ ವ್ಯಾಪ್ತಿಯ ಎಲ್ಲ ಅಂಗಡಿಗಳ ನೌಕರರು ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇರಿಸಿಕೊಳ್ಳಬೇಕು. ಇದರ ಖಚಿತತೆಯ ಹೊಣೆಯನ್ನು ನಗರಸಭೆಯ ಕಾರ್ಯದರ್ಶಿಗಳು ವಹಿಸಬೇಕು ಎಂದು ಸಭೆಯು ತಿಳಿಸಿದೆ.
ಕಾಲ್ ಎಟ್ ಸ್ಕೂಲ್ ಯೋಜನೆ ಚುರುಕುಗೊಳಿಸಲು ಮತ್ತು ಕಾಲ್ ಎಟ್ ಕಾಲೇಜು
ಯೋಜನೆ ಆರಂಭಿಸುವ ನಿಟ್ಟಿನಲ್ಲಿ ಶೀಘ್ರವೇ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಇದರ ಹೊಣೆಯನ್ನು ಶಿಕ್ಷಣ ಉಪನಿರ್ದೇಶಕಿ ಅವರಿಗೆ ನೀಡಲಾಗಿದೆ. ಆರ್‌ಟಿಪಿಸಿಆರ್ ತಪಾಸಣೆಗಾಗಿ ಜಿಲ್ಲೆಯಲ್ಲಿ ಲ್ಯಾಬ್‌ಗಳು ಕಡಿಮೆಯಿದ್ದು , ಇರುವ ಲ್ಯಾಬ್‌ಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಲಾಗುವುದು.
ಕೋವಿಡ್ ಸಂಹಿತೆಗಳನ್ನು ಉಲ್ಲಂಘಿಸಿ ಕ್ರೀಡಾ ಪಂದ್ಯಾಟಗಳನ್ನು ನಡೆಸಿದರೆ ಕಠಿಣ ಕ್ರಮಕೈಗೊಳ್ಳಲು ಪೊಲೀಸರಿಗೆ ಜಿಲ್ಲಾಧಿಕಾರಿ ಆದೇಶಿಸಿದರು.
ಸತತ ತಪಾಸಣೆ ನಡೆಸಿಕೊಂಡು ಬರುತ್ತಿರುವ ಪರಿಣಾಮ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವಿಕೆ ಕಡಿಮೆಯಾಗಲು ಕಾರಣವಾಗಿದೆ ಎಂದು ಜಿಲ್ಲೆಯ ಹೊಣೆಗಾರಿಕೆಯ ನೋಡೆಲ್ ಅಧಿಕಾರಿ ಜಾಫರ್ ಮಲಿಕ್ ತಿಳಿಸಿದರು.
ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್. ನಾಥ್, ಡಿವೈಎಸ್‌ಪಿ ಜೈಸನ್ ಕೆ. ಅಬ್ರಹಾಂ, ಡಿಡಿಇ ಕೆ.ವಿ.ಪುಷ್ಪಾ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss